ಡಂಬುಲ: ಇಂದು ನಡೆಯುವ ಮಹಿಳಾ ಏಷ್ಯಾ ಕಪ್ ಟಿ20 ಕ್ರಿಕೆಟ್(Womens Asia Cup 2024) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ(India Women) ಮತ್ತು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ(Pakistan Women) ಸೆಣಸಾಟ ನಡೆಯಲಿದೆ. ಈ ಪಂದ್ಯ ರಾತ್ರಿ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಯುಎಇ- ನೇಪಾಲ ಎದುರಾಗಲಿವೆ.
ಇದೇ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸಿದ್ಧತೆಗೆ ಈ ಪಂದ್ಯಾವಳಿ ಎಲ್ಲ ತಂಡಗಳಿಗೂ ಅತ್ಯಂತ ಪ್ರಮುಖವಾಗಿದೆ. ಒಟ್ಟು 8 ತಂಡಗಳು ಈ ಬಾರಿ ಏಷ್ಯಾಕಪ್ನಲ್ಲಿ ಕಣಕ್ಕಿಳಿಯುತ್ತಿವೆ. ಏಷ್ಯಾ ಕಪ್ ಟಿ20(Womens Asia Cup T20) ಮಾದರಿಯಲ್ಲಿ ಆಡಿದ 20 ಪಂದ್ಯಗಳಲ್ಲಿ ಭಾರತ 17ರಲ್ಲಿ ಜಯಭೇರಿ ಮೊಳಗಿಸಿದೆ. 2022ರಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಸದ್ಯ ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.
ಪುರುಷರ ಕ್ರಿಕೆಟ್ನಂತೆಯೇ ಮಹಿಳಾ ಕ್ರಿಕೆಟ್ನಲ್ಲಿಯೂ ಭಾರತ ತಂಡ ಪಾಕಿಸ್ತಾನ(India Women vs Pakistan Women) ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಇದುವರೆಗೆ 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಏಷ್ಯಾ ಕಪ್‌ನಲ್ಲಿ ಒಟ್ಟು 6 ಸಲ ಮುಖಾಮುಖೀಯಾಗಿದ್ದು, ಭಾರತ ಐದನ್ನು ಗೆದ್ದಿದೆ. ಭಾರತ ಇತ್ತೀಚೆಗೆ ತವರಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಹೀಗಾಗಿ ಇದೇ ಪ್ರದರ್ಶನ ಏಷ್ಯಾಕಪ್ನಲ್ಲಿಯೂ ಮೂಡಿಬರಬಹುದೆಂದು ನಿರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ INDW vs PAKW: ನಾಳೆಯಿಂದ ಮಹಿಳಾ ಏಷ್ಯಾ ಕಪ್; ಭಾರತಕ್ಕೆ ಪಾಕ್ ಎದುರಾಳಿ
ಭಾರತ ಸಮರ್ಥ ತಂಡ
ಹರ್ಮನ್‌ಪ್ರೀತ್ ಸಾರಥ್ಯದ ಭಾರತ ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಹೀಗೆ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ, ಶಫಾಲಿ ವರ್ಮ, ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ ಮತ್ತು ರಿಚಾ ಘೋಷ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಪೇಸ್ ಹಾಗೂ ಸ್ಪಿನ್ ವಿಭಾಗಗಳೆರಡೂ ಬಲಿಷ್ಠ. ಪೂಜಾ ವಸ್ತ್ರಾಕರ್, ರಾಧಾ ಯಾದವ್, ಆಲ್‌ರೌಂಡರ್ ದೀಪ್ತಿ ಶರ್ಮ ಭಾರತದ ಬೌಲಿಂಗ್ ಅಸ್ತ್ರವಾಗಿದ್ದಾರೆ. ಕನ್ನಡಿತಿ ಶ್ರೇಯಾಂಕಾ ಪಾಟೀಲ್ ಕೂಡ ತಂಡದಲ್ಲಿದ್ದು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಪಾಕಿಸ್ತಾನ ತಂಡ ಕೂಡ ಯುವ ಮತ್ತು ಅನುಭವಿ ಆಟಗಾರ್ತಿಯರ ಸಮಿಶ್ರಣದೊಂದಿಗೆ ಬಲಿಷ್ಠವಾಗಿ ಗೋಚರಿಸಿದೆ. ನಾಯಕಿ ನಿದಾ ದರ್, ಇರಮ್ ಜಾವೇದ್, ಒಮೈಮಾ ಸೊಹೈಲ್, ಸಯ್ಯದ್ ಅರೂಬ್ ಶಾ ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.
ಉಭಯ ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.
ಪಾಕಿಸ್ತಾನ: ನಿದಾ ದಾರ್ (ನಾಯಕಿ), ಇರಾಮ್ ಜಾವೇದ್, ಸಾದಿಯಾ ಇಕ್ಬಾಲ್, ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಮುನೀಬಾ ಅಲಿ, ಸಿದ್ರಾ ಅಮೀನ್, ನಜಿಹಾ ಅಲ್ವಿ, ಸೈಯದಾ ಅರೂಬ್ ಶಾ, ನಶ್ರಾ ಸುಂಧು, ತಸ್ಮಿಯಾ ರುಬಾಬ್, ಒಮೈಮಾ ಸೊಹೈಲ್, ತುಬಾ ಹಸನ್