ದಾಂಬುಲಾ (ಶ್ರೀಲಂಕಾ): ಮಹಿಳಾ ಏಷ್ಯಾಕಪ್ ಫೈನಲ್(Womens Asia Cup Final) ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ನಾಳೆ ನಡೆಯುವ ಫೈನಲ್ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ಶ್ರೀಲಂಕಾ(India Women vs Sri Lanka Women Final) ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. 7 ಬಾರಿಯ ಚಾಂಪಿಯನ್ ಭಾರತವೇ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್ ಆಗಿದೆ. ಅತ್ತ ಆತಿಥೇಯ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇದಾರೆಯಲ್ಲಿದೆ. ಇತ್ತಂಡಗಳು ಕೂಡ ಈ ಬಾರಿ ಅಜೇಯ ತಂಡಗಳಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ. ಹೀಗಾಗಿ ಈ ಪಂದ್ಯದವನ್ನು ಹೈವೋಲ್ಟೇಜ್ ಎಂದು ನಿರೀಕ್ಷೆ ಮಾಡಬಹುದು.
ಮಹಿಳಾ ಏಷ್ಯಾ ಕಪ್ ಈವರೆಗಿನ 8 ಕೂಟಗಳಲ್ಲಿ ಭಾರತ 7 ಸಲ ಚಾಂಪಿಯನ್ ಆಗುವ ಮೂಲಕ ಪ್ರಭುತ್ವ ಸಾಧಿಸಿದೆ. ಸೋಲು ಕಂಡಿದ್ದು ಒಮ್ಮೆ ಮಾತ್ರ. ಅದು 2018ರಲ್ಲಿ ಬಾಂಗ್ಲಾದೇಶ ವಿರುದ್ಧ. ಅಂದಿನ ಫೈನಲ್ ಪಂದ್ಯದಲ್ಲಿ ಭಾರತ 3 ವಿಕೆಟ್ ಅಂತರದಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.
6ನೇ ಬಾರಿ ಭಾರತ-ಲಂಕಾ ಫೈನಲ್ ಮುಖಾಮುಖಿ
ಇದುವರೆಗಿನ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ 5 ಬಾರಿ ಫೈನಲ್ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತವೇ ಗೆದ್ದು ಬೀಗಿದೆ. ಈ ಬಾರಿಯದ್ದು 6ನೇ ಮುಖಾಮುಖಿ. 6ನೇ ಪ್ರಯತ್ನದಲ್ಲಾದರೂ ಲಂಕಾ ಪ್ರೋಫಿ ಗೆಲ್ಲಬಹುದೇ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.
ಭಾರತ ಪರ ಬ್ಯಾಟಿಂಗ್ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಎಲ್ಲ ಪಂದ್ಯಗಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಶಫಾಲಿ 184 ರನ್ ಗಳಿಸಿ ಕೂಟದ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗ ತುಂಬಾನೆ ಘಾತಕವಾಗಿದೆ. ಸ್ಪಿನ್ನ್ ಮತ್ತು ವೇಗದ ವಿಭಾಗದಲ್ಲಿ ಸಮತೋಲಿತವಾಗಿದೆ. ರಾಧಾ ಯಾದವ್, ಆಲ್ರೌಂಡರ್ ದೀಪ್ತಿ ಶರ್ಮಾ ತಂಡದ ಸ್ಪಿನ್ನರ್ಗಳಾದರೆ, ವೇಗಿ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ವೇಗಿಗಳಾಗಿದ್ದಾರೆ.
ಇದನ್ನೂ ಓದಿ Womens Asia Cup T20: ಬಾಂಗ್ಲಾ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ
ಲಂಕಾ ಕೂಡ ಬಲಿಷ್ಠ
ಎದುರಾಳಿ ಶ್ರೀಲಂಕಾ ಕೂಡ ಭಾರತದ ಹಾಗೆ ಬಲಿಷ್ಠವಾಗಿದೆ. ಅದರಲ್ಲೂ ಕೂಟದ ಗರಿಷ್ಠ ಸ್ಕೋರರ್ ಎನಿಸಿಕೊಂಡಿರುವ ನಾಯಕಿ ಚಾಮರಿ ಅತಪಟ್ಟು ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಒಂದು ಶತಕ ಕೂಡ ಬಾರಿಸಿದ್ದಾರೆ. ಆಡಿದ 4 ಪಂದ್ಯಗಳಿಂದ 243 ರನ್ ಕಲೆ ಹಾಕಿದ್ದಾರೆ. ಇವರನ್ನು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸದಂತೆ ಭಾರತೀಯ ಬೌಲರ್ಗಳು ನೋಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ನಿನ್ನೆ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾವನ್ನು ಮಣಿಸಿದರೆ, ಶ್ರೀಲಂಕಾ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಸಂಭಾವ್ಯ ತಂಡಗಳು
ಶ್ರೀಲಂಕಾ: ವಿಶ್ಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನುಷ್ಕಾ ಸಂಜೀವನಿ (ವಾಕ್), ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಇನೋಶಿ ಪ್ರಿಯದರ್ಶನಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ.
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಚೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್, ರೇಣುಕಾ ಠಾಕೂರ್ ಸಿಂಗ್.