ಬೆಂಗಳೂರು: ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್(Women’s Asia Cup) ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ಆಲ್ ರೌಂಡರ್, ಕನ್ನಡತಿ, ಶ್ರೇಯಾಂಕಾ ಪಾಟೀಲ್(Shreyanka Patil) ಅವರು ಕೈ ಬೆರಳಿನ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ(Shreyanka Patil ruled out) ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ತನುಜಾ ಕನ್ವರ್ ಆಯ್ಕೆಯಾಗಿದ್ದಾರೆ.
ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಹೊರ ಬಿದ್ದ ವಿಚಾರವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಶ್ರೇಯಾಂಕಾ 3.4 ಓವರ್ಗಳಲ್ಲಿ 14 ರನ್ ನೀಡಿ 2 ವಿಕೆಟ್ ಉರುಳಿಸಿದ್ದರು. ಇದೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಾಂಕಾ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಎಡಗೈಯನ ಬೆರಳು ಮುರಿತವಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ.
ಉದಯೋನ್ಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಶ್ರೇಯಾಂಕಾ ಭಾರತ ಪರ 12 ಟಿ20 ಪಂದ್ಯಗಳನ್ನಾಡಿದ್ದು 16 ವಿಕೆಟ್ ಕಿತ್ತಿದ್ದಾರೆ. ಏಕದಿನದಲ್ಲಿ 5 ವಿಕೆಟ್ ಕಲೆಹಾಕಿದ್ದಾರೆ. 21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ಇದನ್ನೂ ಓದಿ WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್ ಕಂಡು ದಂಗಾದ ಆರ್‌ಸಿಬಿ ಅಭಿಮಾನಿಗಳು
ಇಂದು ನಡೆಯುವ ಪಂದ್ಯದಲ್ಲಿ ಭಾರತ ತಂಡ ಯುಎಇ(United Arab Emirates Women) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿಫೈನಲ್ ಟಿಕೆಟ್ ಖಾತ್ರಿಗೊಳ್ಳಲಿದೆ. ಭಾರತ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮ, ರಾಧಾ ಯಾದವ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಬ್ಯಾಟಿಂಗ್ ವಿಭಾಗ ಕೂಡ ಉತ್ತಮ ರೀತಿಯಲ್ಲಿದೆ. ಶಫಾಲಿ ಶರ್ಮ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ ತಂಡವನ್ನು ಆಧರಿಸಬಲ್ಲರು.
ಯುಎಇ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ತಾನಾಡಿದ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ಇದೀಗ ಭಾರತ ವಿರುದ್ಧ ಸೋತರೆ ಕೂಟದಿಂದ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ ಯುಎಇಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಭಾರತ ಪರಿಷ್ಕೃತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ತನುಜಾ ಕನ್ವರ್ , ಸಜನಾ ಸಜೀವನ್.