ದಂಬುಲ್ಲಾ(ಶ್ರೀಲಂಕಾ): ಲೇಡಿ ಸೆಹವಾಗ್ ಖ್ಯಾತಿಯ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮಾ(81) ಅವರ ಪ್ರಚಂಡ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವು ಪಡೆದ ಭಾರತ ತಂಡ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ(Womens Asia Cup) ನೇಪಾಳ(India Women vs Nepal Women) ವಿರುದ್ಧ 82 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ ಹಂತಕ್ಕೇರಿದೆ.
ಇಲ್ಲಿನ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Rangiri Dambulla International Stadium) ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆರಂಭಿಕ ಆಟಗಾರ್ತಿಯಾದ ದಯಾಳನ್ ಹೇಮಲತಾ(47) ಮತ್ತು ಶಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 178 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ನೇಪಾಳ ಆರಂಭದಲ್ಲೇ ಸತತವಾಗಿ ವಿಕೆಟ್ ಕಳೆದುಕೊಂಡು ಅಂತಿಮವಾಗಿ 9 ವಿಕೆಟ್ಗೆ 96 ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ ಆರು ವಿಕೆಟ್ ಗೆಲುವಿನೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದ ನೇಪಾಳ ತಂಡ ಇಂದಿನ ಪಂದ್ಯದಲ್ಲಿ ಭಾರತ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುತ್ತಿದ್ದರೆ ಪಾಕಿಸ್ತಾನವನ್ನು ಹಿಂದಿಕ್ಕಿ ಸೆಮಿಫೈನಲ್ ಹಂತಕ್ಕೇರುವ ಅವಕಾಶವಿತ್ತು. ಆದರೆ ಸೋಲು ಕಂಡು ಈ ಅವಕಾಶದಿಂದ ವಂಚಿತವಾಯಿತು. ಭಾರತ ಪರ ಬೌಲಿಂಗ್ನಲ್ಲಿ ಅರುಂಧತಿ ರೆಡ್ಡಿ(2), ದೀಪ್ತಿ ಶರ್ಮಾ(3), ರಾಧಾ ಯಾದವ್(2) ವಿಕೆಟ್ ಕಿತ್ತು ಮಿಂಚಿದರು.
ಉತ್ತಮ ಆರಂಭ ಪಡೆದ ಭಾರತ
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿಯಾದ ದಯಾಳನ್ ಹೇಮಲತಾ ಮತ್ತು ಶಫಾಲಿ ವರ್ಮಾ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿದರು. ಉಭಯ ಆಟಗಾರ್ತಿಯರ ಈ ಬ್ಯಾಟಿಂಗ್ ಪೈಪೋಟಿಯಿಂದಾಗಿ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ ಈ ಜೋಡಿ ಬರೋಬ್ಬರಿ 122 ರನ್ ಒಟ್ಟುಗೂಡಿಸಿತು. ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಹೇಮಲತಾ 47 ರನ್ ಗಳಿಸಿದ್ದ ವೇಳೆ ವಿಕೆಟ್ ಕೈಚೆಲ್ಲಿದರು. ಕೇವಲ 3 ರನ್ ಅಂತೆದಿಂದ ಅರ್ಧಶತಕ ತಪ್ಪಿಸಿಕೊಂಡರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ದಾಖಲಾಯಿತು.
ಇದನ್ನೂ ಓದಿ
ದಾಖಲೆ ಬರೆದ ಶಫಾಲಿ
ಜತೆಗಾರ್ತಿ ಹೇಮಲತಾ ವಿಕೆಟ್ ಬಿದ್ದರೂ ಕೂಡ ಶಫಾಲಿ ಬ್ಯಾಟಿಂಗ್ ಆರ್ಭಟಕ್ಕೇನು ಅಡ್ಡಿಯಾಗಲಿಲ್ಲ. ಅವರು ಮುನ್ನುಗ್ಗಿ ಬಾರಿಸುತ್ತಲೇ ಇದ್ದರು. ಕೇವಲ 26 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಇದು ಅವರ 10ನೇ ಟಿ20 ಅರ್ಧಶತಕ. ಇನ್ನೇನು ಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ ಅವಸರ ಮಾಡಿಕೊಂಡು ಸ್ಟಂಪ್ಡ್ ಆಗಿ ವಿಕೆಟ್ ಕಳೆದುಕೊಂಡರು. 48 ಎಸೆತ ಎದುರಿಸಿದ ಶಫಾಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 81 ರನ್ ಬಾರಿಸಿದರು. ಇದೇ ವೇಳೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪರ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು. ದಾಖಲೆ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಹೆಸರಿನಲ್ಲಿದೆ. ಮಿಥಾಲಿ 2018 ರಲ್ಲಿ ಮಲೇಷ್ಯಾ ವಿರುದ್ಧ ಅಜೇಯ 97 ರನ್ ಬಾರಿಸಿದ್ದರು. 2022 ರಲ್ಲಿ ಶ್ರೀಲಂಕಾ ವಿರುದ್ಧ 76 ರನ್ ಬಾರಿಸಿದ್ದ ಜೆಮಿಮಾ ರಾಡ್ರಿಗಸ್ ದಾಖಲೆ ಪತನಗೊಂಡಿತು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದ ದಾಖಲೆಯನ್ನೂ ಕೂಡ ಶಫಾಲಿ ಈ ಪಂದ್ಯದಲ್ಲಿ ನಿರ್ಮಿಸಿದರು.
ಶಫಾಲಿ ವಿಕೆಟ್ ಪತನದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 15 ಎಸೆತಗಳಿಂದ ಅಜೇಯ 28 ರನ್ ಬಾರಿಸಿದರು. ರಿಚಾ ಘೋಷ್ 6 ರನ್ ಗಳಿಸಿ ಅಜೇಯರಾಗಿ ಉಳಿದರು. ಎಸ್ ಸಜನಾ 10 ರನ್ ಬಾರಿಸಿದರು. ನೇಪಾಳ ಪರ ಸೀತಾ ರಾಣಾ ಮಗರ್ 25 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತರು.
ಹರ್ಮನ್ಪ್ರೀತ್ಗೆ ವಿಶ್ರಾಂತಿ
ಖಾಯಂ ನಾಯಕಿ ಹರ್ಮನ್ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದರು. ಆದರೆ ಅವರು ಬ್ಯಾಟಿಂಗ್ ನಡೆಸಲಿಲ್ಲ. ಯುವ ಆಟಗಾರ್ತಿಯರಿಗೆ ಅವಕಾಶ ನೀಡಿದರು.