ಮುಂಬಯಿ: ಮುಂದಿನ ವರ್ಷ ಮಾರ್ಚ್ 2023ರಿಂದ ಪ್ರಾರಂಭವಾಗಲಿರುವ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ (Women’s IPL) ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಚೊಚ್ಚಲ ಸೀಸನ್‌ನಲ್ಲಿ ಬಿಸಿಸಿಐ (BCCI) ಒಟ್ಟು ಐದು ಫ್ರಾಂಚೈಸಿಗಳ ಖರೀದಿಗೆ ಬರೋಬ್ಬರಿ 400 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿದೆ ಎಂದು ವರದಿಯೊಂದು ತಿಳಿಸಿದೆ.
ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಐಪಿಎಲ್ನಲ್ಲೂ ದೊಡ್ಡ ಮೊತ್ತದ ಮೇಲೆ ಬಿಸಿಸಿಐ ಕಣ್ಣಿಟ್ಟಿದ್ದು, ಫ್ರಾಂಚೈಸಿಗಳ ಟೆಂಡರ್ ಆಹ್ವಾನಿಸಲು ಬಿಸಿಸಿಐ 400 ಕೋಟಿ ರೂ. ನಿಗದಿಪಡಿಸಿದೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಈ ಮಾಹಿತಿ ಖಚಿತವಾದರೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ದಾಖಲೆ ಎನ್ನಬಹುದು.
ಮಹಿಳಾ ಐಪಿಎಲ್ನ ಚೊಚ್ಚಲ ಸೀಸನ್‌ನಲ್ಲಿ 5 ತಂಡಗಳಿರಲಿದ್ದು ಒಟ್ಟು 20 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಉಳಿದಂತೆ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಪುರುಷರ ಐಪಿಎಲ್ ಮಾದರಿಯಲ್ಲೇ ನಡೆಯಲಿದೆ.
18 ಆಟಗಾರ್ತಿಯರನ್ನು ಹೊಂದಿರಬೇಕು
ಮಹಿಳಾ ಐಪಿಎಲ್ ಕಾರ್ಯಯೋಜನೆ ಕುರಿತು ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ತಂಡದಲ್ಲಿ ದೇಶಿ ಹಾಗೂ ವಿದೇಶಿ ಕ್ರಿಕೆಟಿಗರ ಸಮಬಲ ಇರಬೇಕು. ಐದು ತಂಡಗಳೊಂದಿಗೆ ಮಹಿಳೆಯರನ್ನು ಸಂಘಟಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಪ್ರತಿ ತಂಡವು 18 ಆಟಗಾರರನ್ನು ಹೊಂದಿರಬೇಕು ಎಂಬ ನಿಯಮ ಮಾಡಲಾಗಿದೆ. ಅದರಲ್ಲಿ ಆರಕ್ಕಿಂತ ಹೆಚ್ಚು ವಿದೇಶಿ ಕ್ರಿಕೆಟಿಗರು ಇರಬಾರದು. ಅಲ್ಲದೆ, ಅಂತಿಮ ತಂಡದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಇರಬಾರದು. ಅವರಲ್ಲಿ ನಾಲ್ವರು ಐಸಿಸಿ ಸದಸ್ಯತ್ವದ ದೇಶಗಳಿಗೆ ಸೇರಿದವರಾಗಿರಬೇಕು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | IND VS NZ | ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಭಾರತದ ಸರಣಿ ಸಮಬಲದ ಕನಸು ನನಸಾದೀತೇ?