ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಐಪಿಎಲ್ ಆರಂಭಕ್ಕೆ ಕೆಲವೇ ವಾರಗಳೂ ಬಾಕಿ ಉಳಿದಿವೆ. ಏತನ್ಮಧ್ಯೆ, ಸೋಮವಾರ ಟೂರ್ನಿಯ ನೇರ ಪ್ರಸಾರದ ಹಕ್ಕುಗಳ ಹರಾಜು ಪ್ರಕ್ರಿಯೆ ವಿತರಣೆಯಾಗಿದ್ದು ರಿಲಯನ್ಸ್ ಒಡೆತನದ ವಯಾಕಾಮ್ 18 ಸಂಸ್ಥೆ ಐದು ವರ್ಷಗಳ ಅವಧಿಗೆ ಹಕ್ಕುಗಳನ್ನು ಪಡೆದುಕೊಂಡಿದೆ. ಅದಕ್ಕಾಗಿ 951 ಕೋಟಿ ರೂಪಾಯಿಯನ್ನು ವಿನಿಯೋಗ ಮಾಡಿದೆ. ಹೀಗಾಗಿ ಮುಂದಿನ ಐದು ಆವೃತ್ತಿಯ ಮಹಿಳೆಯರ ಐಪಿಎಲ್ ವಯಾಕಾಮ್ 18 ಚಾನೆಲ್ಗಳಲ್ಲಿ ಪ್ರಸಾರವಾಗಲಿದೆ. ಅಂತೆಯೇ ಜಿಯೋ ಸಿನಿಮಾ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪ್ರಸಾರದ ಹಕ್ಕಿನ ವಿತರಣೆಯ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಒಟ್ಟು ಮೊತ್ತವನ್ನು ವಿಭಾಗಿಸಿದರೆ ಪ್ರತಿಯೊಂದು ಪಂದ್ಯಕ್ಕೆ 7.09 ಕೋಟಿ ರೂಪಾಯಿಗಳು ಲಭಿಸಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಐಪಿಎಲ್ನ ಮಾಧ್ಯಮ ಹಕ್ಕನ್ನು 951 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿರುವ ವಯಾಕಾಮ್ 18 ಸಂಸ್ಥೆಗೆ ಶುಭಾಶಯಗಳು. ಬಿಸಿಸಿಐ ಹಾಗೂ ಬಿಸಿಸಿಐ ಮಹಿಳಾ ವಿಭಾಗದ ಬಗೆಗಿನ ನಿಮ್ಮ ನಂಬಿಕೆಗೆ ಧನ್ಯವಾದಗಳು. ಇದರಿಂದ ಮಹಿಳಾ ಕ್ರಿಕೆಟ್ಗೆ ಉತ್ತೇಜನ ಸಿಗಲಿದೆ, ಎಂದು ಜಯ್ಶಾ ಅವರು ಟ್ವೀಟ್ ಮಾಡಿದ್ದಾರೆ.
ವಯಾಕಾಮ್ 18 ಸಂಸ್ಥೆಯು ಪುರುಷರ ಐಪಿಎಲ್ನ ಮಾಧ್ಯಮ ಹಕ್ಕುಗಳನ್ನು ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್ನ ಮಾಧ್ಯಮ ಹಕ್ಕುಗಳನ್ನೂ ತನ್ನದಾಗಿಸಿಕೊಂಡಿದೆ.
ಕ್ರಿಕ್ ಇನ್ಫೋದ ವರದಿ ಪ್ರಕಾರ ಪುರುಷರ ಐಪಿಎಲ್ನಲ್ಲಿ ತಂಡಗಳನ್ನು ಹೊಂದಿರುವ ಏಳು ಫ್ರಾಂಚೈಸಿಗಳು ಮಹಿಳೆಯರ ಐಪಿಎಲ್ನಲ್ಲೂ ತಂಡಗಳನ್ನು ಹೊಂದಲು ಆಸಕ್ತಿ ವಹಿಸಿವೆ.
ಇದನ್ನೂ ಓದಿ | Women’s IPL | ಮಹಿಳೆಯರ ಐಪಿಎಲ್ ನೇರ ಪ್ರಸಾರ ಹಕ್ಕು ವಿತರಣೆ ಟೆಂಡರ್ ಕರೆದ ಬಿಸಿಸಿಐ