ಮುಂಬಯಿ: ಬಿಸಿಸಿಐ ಈಗಾಗಲೇ ಚೊಚ್ಚಲ ಮಹಿಳಾ ಐಪಿಎಲ್(WOMENS IPL) ನಡೆಸಲು ಸಿದ್ಧತೆ ನಡೆಸಿದೆ. ಈ ಮಧ್ಯೆ ಮಾಧ್ಯಮ ಹಕ್ಕುಗಳಿಗಾಗಿ ಕಂಪೆನಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ದೇಶದ 3 ಅಗ್ರ ಪ್ರಸಾರ ಕಂಪೆನಿಗಳು ಮತ್ತು ಓಟಿಟಿ ಫ್ಲಾಪ್ಫಾರ್ಮ್ಗಳು ಈ ಹಕ್ಕುಗಳಿಗಾಗಿ ಬಹಳ ಆಸಕ್ತಿ ಹೊಂದಿವೆ.
ಸದ್ಯದ ಮಾಹಿತಿ ಪ್ರಕಾರ ಡಿಸ್ನಿ ಪ್ಲಸ್ ಸ್ಟಾರ್, ಸೋನಿ, ಜೀ ಕಂಬೈನ್ ಮತ್ತು ವಯಕಾಮ್-18 ಕಂಪನಿಗಳು, ವನಿತಾ ಐಪಿಎಲ್ ಪ್ರಸಾರದ ಮಾಧ್ಯಮ ಹಕ್ಕುಗಳನ್ನು ಪಡೆಯಲು ಸಜ್ಜಾಗಿವೆ ಎಂದು ತಿಳಿದುಬಂದಿದೆ.
ಜನವರಿ 16, ಬಿಡ್ ಸಲ್ಲಿಕೆ ಅಂತಿಮ ದಿನವಾಗಿದ್ದು, ಬಿಡ್ ಮುಗಿದ ಬೆನ್ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಉದ್ಘಾಟನಾ ವನಿತಾ ಐಪಿಎಲ್ ಮಾ.3ರಿಂದ 26ರವರೆಗೆ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಆಟಗಾರ್ತಿಯರ ಮೂಲ ಬೆಲೆ ನಿಗದಿ
ವನಿತಾ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರ್ತಿಯರ ಮೂಲ ಬೆಲೆ ನಿಗದಿಪಡಿಸಲಾಗಿದೆ. ಟೆಸ್ಟ್ ಅಥವಾ ಏಕದಿನ ಪಂದ್ಯವನ್ನಾಡಿದ ಆಟಗಾರ್ತಿಯರ ಮೂಲ ಬೆಲೆಯನ್ನು 30 ಲಕ್ಷ ರೂ., 40 ಲಕ್ಷ ರೂ. ಮತ್ತು 50 ಲಕ್ಷ ರೂ. ಹಾಗೂ ಇತರ ಆಟಗಾರ್ತಿಯರ ಮೂಲ ಬೆಲೆಯನ್ನು 20 ಲಕ್ಷ ರೂ. ಎಂದು ಬಿಸಿಸಿಐ ನಿಗದಿಪಡಿಸಿದೆ.
ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ವನಿತಾ ತಂಡವನ್ನು ರಚಿಸುವ ಬಗ್ಗೆ ಆಸಕ್ತಿ ವಹಿಸಿವೆ ಎನ್ನಲಾಗಿದೆ.
ಇದನ್ನೂ ಓದಿ | WOMENS IPL | ದೇಶೀಯ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್ ಉತ್ತಮ ವೇದಿಕೆ; ಹರ್ಮನ್ಪ್ರೀತ್ ಕೌರ್ ವಿಶ್ವಾಸ