ಮುಂಬಯಿ : ಬಹುನಿರೀಕ್ಷಿತ ಮಹಿಳೆಯರ ಐಪಿಎಲ್ (Women’s IPL) ಮುಂದಿನ ವರ್ಷದ ಆರಂಭದಲ್ಲೇ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ಕುರಿತು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಮೇಲ್ ರವಾನೆ ಮಾಡಿದ್ದು, ಆಯೋಜನೆಯ ಸಿದ್ಧತೆಯ ಸೂಚನೆ ಕೊಟ್ಟಿದ್ದಾರೆ. ಮಹಿಳೆಯರ ಐಪಿಎಲ್ ನಡೆಸಬೇಕು ಎಂಬುದು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದ್ದ ಆಗ್ರಹವಾಗಿತ್ತು. ಆ ಹಿನ್ನೆಲೆಯಲ್ಲಿ ಬಿಸಿಸಿಐ ಬಹುತೇಕ ಕೆಲಸ ಆರಂಭಿಸಿದೆ.
ಮಹಿಳೆಯ ಟಿ೨೦ ಲೀಗ್ ನಡೆಯುತ್ತಿದ್ದ ಹೊರತಾಗಿಯೂ ಪೂರ್ಣ ಪ್ರಮಾಣದ ಲೀಗ್ ಆರಂಭಿಸಬೇಕು ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿತ್ತು. ಅಂತೆಯೇ ಪ್ರಸಕ್ತ ವರ್ಷದ ಆರಂಭದಲ್ಲಿ ಸೌರವ್ ಗಂಗೂಲಿ ಅವರು ೨೦೨೩ರಲ್ಲಿ ಆರಂಭಿಸುತ್ತೇವೆ ಎಂದು ಹೇಳಿದ್ದರು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ.
ಪುರುಷರ ಐಪಿಎಲ್‌ನ ಫ್ರಾಂಚೈಸಿಗಳು ಮಹಿಳೆಯರ ಐಪಿಎಲ್‌ನಲ್ಲಿ ತಂಡ ಖರೀದಿಗೆ ಮುಂದಾಗಿದೆ ಎಂದೂ ಹೇಳಲಾಗುತ್ತಿದೆ. ಕನಿಷ್ಠ ಪಕ್ಷ ಆರು ತಂಡಗಳ ಟೂರ್ನಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
“ಬಿಸಿಸಿಐ ಎಲ್ಲರ ನಿರೀಕ್ಷೆಯ ಮಹಿಳೆಯರ ಐಪಿಎಲ್ ಆರಂಭಿಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಉದ್ಘಾಟನಾ ಆವೃತ್ತಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸಲಾಗುವುದು,” ಎಂದು ಗಂಗೂಲಿ ಅವರು ರಾಜ್ಯ ಸಂಸ್ಥೆಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಬರೆಯಲಾಗಿದೆ.
ಅಂಡರ್-೧೫ ಟೂರ್ನಿ
oಮಹಿಳೆಯರ ಐಪಿಎಲ್ ಜತೆಗೆ ಮಹಿಳೆಯರ ಅಂಡರ್-೧೫ ಕ್ರಿಕೆಟ್ ಟೂರ್ನಿಯನ್ನೂ ನಡೆಸುವ ಯೋಜನೆ ಬಿಸಿಸಿಐ ಮುಂದಿದೆ. “ಮುಂದಿನ ಕ್ರಿಕೆಟ್ ಋತುವಿನಲ್ಲಿ ಮಹಿಳೆಯರ ಅಂಡರ್-೧೯ ಕ್ರಿಕೆಟ್ ಟೂರ್ನಿ ಆರಂಭಿಸಲು ಉತ್ಸುಕರಾಗಿದ್ದೇವೆ. ಮಹಿಳೆಯರ ಕ್ರಿಕೆಟ್ ಜಾಗತಿಕವಾಗಿ ಬೆಳವಣಿಗೆ ಕಾಣುತ್ತಿದೆ. ನಮ್ಮ ತಂಡವೂ ಉತ್ತಮ ಪ್ರದರ್ಶನ ನೀಡುತ್ತಿದೆ. ಅಂತೆಯೇ ಅಂಡರ್-೧೫ ಟೂರ್ನಮೆಂಟ್ ಆಯೋಜಿಸುವ ಮೂಲಕ ಯುವ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಅವಕಾಶ ಸೃಷ್ಟಿ ಮಾಡಲಾಗುತ್ತದೆ,” ಎಂದು ಮೇಲ್‌ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ | Impact Player | ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ಗೆ ಹೊಸ ನಿಯಮ ಜಾರಿಗೆ ತಂದ ಬಿಸಿಸಿಐ, ಏನಿದು?