ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳೆಯರ ಐಪಿಎಲ್(WOMENS IPL) ನಡೆಸಲು ಬಿಸಿಸಿಐ ಎಲ್ಲ ರೀತಿಯ ಸಿದ್ಧತೆ ಆರಂಭಿಸಿದ್ದು ತಂಡಗಳನ್ನು ಖರೀದಿ ಮಾಡಲು ಟೆಂಡರ್ ಆಹ್ವಾನ ಮಾಡಿದೆ. ಇದರ ಬೆನ್ನಲ್ಲೇ ತಂಡಗಳನ್ನು ಖರೀದಿ ಮಾಡಲು ಸುಮಾರು 30 ಕಂಪನಿಗಳು ಮುಗಿಬಿದ್ದಿವೆ ಎಂದು ವರದಿಯಾಗಿದೆ.
ಮಹಿಳಾ ಐಪಿಎಲ್ ತಂಡ ಹೊಂದಲು ಇದುವರೆಗೆ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದ ಕಂಪನಿಗಳು ಆಸಕ್ತಿ ತೋರಿದೆ ಎಂದು ತಿಳಿದು ಬಂದಿವೆ. ಚೆನ್ನೈ ಮೂಲದ ಶ್ರೀರಾಮ್ ಗ್ರೂಪ್, ನೀಲಗಿರಿ ಗ್ರೂಪ್, ಎಡಬ್ಲ್ಯೂ ಗ್ರೂಪ್, ಹಳದಿರಾಮ್ ಸೇರಿದಂತೆ ಹಲವು ಸಂಸ್ಥೆಗಳು ತಂಡಗಳನ್ನು ಖರೀದಿಸಲು ಪೈಪೋಟಿಯಲ್ಲಿವೆ ಎಂದು ವರದಿಯಾಗಿದೆ.
ಸಿಮೆಂಟ್ ಕಂಪನಿಗಳಾದ ಚೆಟ್ಟಿನಾಡ್ ಸಿಮೆಂಟ್ ಮತ್ತು ಜೆಕೆ ಸಿಮೆಂಟ್ ರೇಸ್ನಲ್ಲಿರುವ ಪ್ರಮುಖ ಕಂಪನಿಗಳಾಗಿ ಗುರುತಿಸಿಕೊಂಡಿವೆ. ಒಂದು ವೇಳೆ ಉಭಯ ಕಂಪೆನಿಗಳಲ್ಲಿ ಒಂದು ಸಂಸ್ಥೆ ಬಿಡ್ ಗೆದ್ದರೂ ಐಪಿಎಲ್ ನಲ್ಲಿ ಪಾಲ್ಗೊಂಡ ಮೂರನೇ ಸಿಮೆಂಟ್ ಕಂಪನಿಯಾಗಿರಲಿದೆ. ಈಗಾಗಲೇ ಇಂಡಿಯಾ ಸಿಮೆಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿ ಹೊಂದಿದೆ. ಜನವರಿ 25ರಂದು ಮುಂಬೈಯಲ್ಲಿ ಹರಾಜು ನಡೆಯಲಿದೆ. ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐ ಮೊದಲ ವರ್ಷದಲ್ಲಿ 125 ಕೋಟಿ ರೂಪಾಯಿಗಳವರೆಗೆ ಗಳಿಸಲಿದೆ.
ಆಟಗಾರ್ತಿಯರ ಮೂಲ ಬೆಲೆ ನಿಗದಿ
ವನಿತಾ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರ್ತಿಯರ ಮೂಲ ಬೆಲೆ ನಿಗದಿಪಡಿಸಲಾಗಿದೆ. ಟೆಸ್ಟ್ ಅಥವಾ ಏಕದಿನ ಪಂದ್ಯವನ್ನಾಡಿದ ಆಟಗಾರ್ತಿಯರ ಮೂಲ ಬೆಲೆಯನ್ನು 30 ಲಕ್ಷ ರೂ., 40 ಲಕ್ಷ ರೂ. ಮತ್ತು 50 ಲಕ್ಷ ರೂ. ಹಾಗೂ ಇತರ ಆಟಗಾರ್ತಿಯರ ಮೂಲ ಬೆಲೆಯನ್ನು 20 ಲಕ್ಷ ರೂ. ಎಂದು ಬಿಸಿಸಿಐ ನಿಗದಿಪಡಿಸಿದೆ
ಇದನ್ನೂ ಓದಿ | WOMENS IPL | ವನಿತಾ ಐಪಿಎಲ್: ಮಾಧ್ಯಮ ಹಕ್ಕು ಪಡೆಯಲು ಮುಗಿಬಿದ್ದ ಕಂಪೆನಿಗಳು!