Site icon Vistara News

Women’s Premier League : ಮಹಿಳೆಯರ ಸೂಪರ್​ ಲೀಗ್​ನ ವೇಳಾಪಟ್ಟಿ ಪ್ರಕಟ; ಎಲ್ಲಿಂದ ಎಲ್ಲಿಯ ತನಕ ಟೂರ್ನಿ?

women's premier league

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​ ಲೀಗ್​ (Women’s Premier League) ಮಾರ್ಚ್​​ 4ರಂದು ಆರಂಭವಾಗಲಿದ್ದು, 26ರಂದು ಫೈನಲ್​ ಪಂದ್ಯ ನಡೆಯಲಿದೆ. ಬಿಸಿಸಿಐ ಈ ಕುರಿತು ಎಲ್ಲ ಫ್ರಾಂಚೈಸಿಗಳಿಗೆ ಮಾಹಿತಿ ರವಾನೆ ಮಾಡಿದೆ. ಈ ಬಾರಿ ಡಬ್ಲ್ಯುಪಿಎಲ್​ ಪಂದ್ಯಗಳು ಮುಂಬಯಿಗೆ ಮಾತ್ರ ಸೀಮಿತಗೊಳ್ಳಲಿದ್ದು, ಬ್ರಬೊರ್ನ್​ ಹಾಗೂ ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಮಾತ್ರ ನಡೆಯಲಿವೆ ಎಂದು ಕ್ರಿಕ್​ಇನ್ಫೋ ವರದಿ ಮಾಡಿದೆ.

ಬಿಸಿಸಿಐ ಕಾರ್ಯಕಾರಿ ಅಧಿಕಾರಿಯಾಗಿರುವ ಹೇಮಂಗ್​ ಬದಾನಿ ಅವರು ಕ್ರಿಕ್​ಇನ್ಫೋಗೆ ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅವರು ಫೆಬ್ರವರಿ 13ರಂದು ಡಬ್ಲ್ಯುಪಿಎಲ್​ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬುದಾಗಿಯೂ ಹೇಳಿದ್ದಾರೆ.

ಮಹಿಳೆಯರ ಸೂಪರ್​ ಲೀಗ್​ನಲ್ಲಿ ಪಾಲ್ಗೊಳ್ಳಲು ಸುಮಾರು 1500 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ಗರಿಷ್ಠ 90 ಆಟಗಾರರು ಮಾತ್ರ ಆಡುವ ಅವಕಾಶ ಪಡೆಯಲಿದ್ದಾರೆ. ಪ್ರತಿಯೊಂದು ತಂಡ 15ರಿಂದ 18 ಆಟಗಾರ್ತಿಯರನ್ನು ಖರೀದಿ ಮಾಡಲಿದೆ ಎಂಬುದಾಗಿ ಹೇಮಂಗ್​ ಬದಾನಿ ಅವರು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವ ಕಪ್​ ಮುಕ್ತಾಯಗೊಂಡ ಎಂಟು ದಿನದಲ್ಲಿ ಸೂಪರ್​ ಲೀಗ್ ಚಾಲನೆ ಪಡೆಯಲಿದೆ. ಫೆಬ್ರವರಿ 28ರಂದು ವಿಶ್ವ ಕಪ್​ನ ಫೈನಲ್​ ನಡೆಯಲಿದ್ದು, ಭಾರತದ ಆಟಗಾರರು ಈಗಾಗಲೇ ವಿಶ್ವ ಕಪ್​ಗಾಗಿ ತೆರಳಿದ್ದಾರೆ. ಪ್ರಯಾಣ ಹಾಗೂ ಆಟಗಾರ್ತಿಯರ ವಾಸ್ತವ್ಯದ ವ್ಯವಸ್ಥೆಯನ್ನು ಸುಗಮವಾಗಿ ಆಯೋಜಿಸುವ ನಿಟ್ಟಿನಲ್ಲಿ ಈ ಬಾರಿಯ ಸೂಪರ್​ ಲೀಗ್ ಟೂರ್ನಿಯನ್ನು ಮುಂಬಯಿಯಲ್ಲೇ ನಡೆಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ : ವಿಸ್ತಾರ Explainer : IPL ಪ್ರಸಾರ ಹಕ್ಕಿಗಾಗಿ ದಿಗ್ಗಜರ ವಾರ್!

ಮಹಿಳೆಯರ ಸೂಪರ್​ ಲೀಗ್​ಗೆ 13ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ವಿಶ್ವ ಕಪ್​ ಆರಂಭಗೊಂಡ ಮೂರೇ ದಿನದಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಮಹಿಳೆಯ ಸೂಪರ್​ ಲೀಗ್​ನ ಪಂದ್ಯಗಳ ನೇರ ಪ್ರಸಾರದ ಹಕ್ಕುಗಳನ್ನು 951 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದ ಬಿಸಿಸಿಐ ಮಹಿಳೆಯರ ಕ್ರಿಕೆಟ್​ ಲೀಗ್​ನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿತ್ತು. ಬಳಿಕ 2023ರಿಂದ 27ರ ವರೆಗಿನ ಅವಧಿಗೆ ಐದು ಫ್ರಾಂಚೈಸಿಗಳನ್ನು ಮಾರಾಟ ಮಾಡುವ ಮೂಲಕ 4669.99 ಕೋಟಿ ಸಂಗ್ರಹ ಮಾಡಿಯೂ ದಾಖಲೆ ಮಾಡಿತ್ತು.

Exit mobile version