ಕೇಪ್ಟೌನ್: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ (Women’s T20 World Cup) ಐರ್ಲೆಂಡ್ ವಿರುದ್ಧ 5 ರನ್ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ, ಸೆಮಿ ಕಾದಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಎದುರಾಗುವ ಸಾಧ್ಯತೆಯಿದೆ.
ಈವರೆಗಿನ 7 ವಿಶ್ವಕಪ್ ಕೂಟಗಳಲ್ಲಿ ಆಸ್ಟ್ರೇಲಿಯದ ವನಿತೆಯರು 6 ಸಲ ಫೈನಲ್‌ಗೆ ಲಗ್ಗೆಯಿರಿಸಿ ಸರ್ವಾಧಿಕ 5 ಸಲ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಕಳೆದೆರಡೂ ಕೂಟಗಳಲ್ಲಿ ಕಾಂಗರೂ ವನಿತೆಯರು ಪರಾಕ್ರಮ ಮೆರೆದಿದ್ದಾರೆ. ಈ ಸಲವೂ ಗೆದ್ದರೆ ಎರಡನೇ ಸಲ ಹ್ಯಾಟ್ರಿಕ್ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
2020ರ ಆಸ್ಟ್ರೇಲಿಯಾ ಆತಿಥ್ಯದ ಟಿ20 ವಿಶ್ವ ಕಪ್ ಕೂಟದಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ಅಲ್ಲಿ ಆಸೀಸ್ ವಿರುದ್ಧ ತೀವ್ರ ಬ್ಯಾಟಿಂಗ್ ಬರಗಾಲಕ್ಕೆ ಸಿಲುಕಿ 99ಕ್ಕೆ ಕುಸಿದು ಟ್ರೋಫಿಯನ್ನು ಕಳೆದುಕೊಳ್ಳಬೇಕಾಯಿತು. ಒಂದೊಮ್ಮೆ ಈ ಬಾರಿ ಆಸೀಸ್ ತಂಡ ಸೆಮಿಫೈನಲ್ನಲ್ಲಿ ಎದುರಾದರೆ ಕಳೆದ ಬಾರಿಯ ಫೈನಲ್ ಸೋಲಿಗೆ ಹರ್ಮನ್ಪ್ರೀತ್ ಕೌರ್ ಬಳಗ ಸೇಡು ತೀರಿಸೀತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ ICC Women’s T20 World Cup : ರೋಹಿತ್ ದಾಖಲೆ ಮುರಿದ ಹರ್ಮನ್ಪ್ರೀತ್ ಕೌರ್ ವಿಶ್ವದಾಖಲೆಯೂ ಬರೆದರು; ಏನದು ಸಾಧನೆ?
ಸದ್ಯ ಭಾರತ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಸ್ಮೃತಿ ಮಂಧಾನಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗ ಸುಧಾರಣೆ ಕಂಡರೆ ಆಸೀಸ್ ಸವಾಲನ್ನು ಮೀರಲು ಸಾಧ್ಯ ಎನ್ನಲಡ್ಡಿಯಿಲ್ಲ.