Site icon Vistara News

Women’s T20 World Cup: ವಿಶ್ವಕಪ್​ ನಡೆಸಲು ಸೇನೆಯ ನೆರವು ಕೇಳಿದ ಬಾಂಗ್ಲಾ ಕ್ರಿಕೆಟ್​ ಮಂಡಳಿ

Women’s T20 World Cup

Women’s T20 World Cup: Bangladesh Cricket Board Writes To Army Chief Looking For Security Assurance During Women’s T20 World Cup

ಢಾಕಾ: ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ(Women’s T20 World Cup) ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಬಾಂಗ್ಲಾದೇಶದಲ್ಲಿ(bangladesh violence)  ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳು ಹಿಂಸಾತ್ಮಕ ರೂಪ ತಳೆದ ಕಾರಣ ಶೇಕ್ ಹಸೀನಾ‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ಸೋಮವಾರ (ಆ.04) ಭಾರತಕ್ಕೆ ಪಲಾಯನ ಮಾಡಿದ್ದರು. ಹೊಸ ಸರ್ಕಾರ ರಚನೆಯಾಗಿದ್ದರೂ ಕೂಡ ಹಿಂಸಾತ್ಮಕ ಘಟನೆಗಳು ಇನ್ನೂ ನಡೆಯುತ್ತಲೇ ಇದೆ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (Bangladesh Cricket Board) ಸೇನೆಯ ನೆರವು ಕೋರಿದೆ.

ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದಿದ್ದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿದೆ. ಐಸಿಸಿ ಕೂಡ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದೊಮ್ಮೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸದೇ ಹೋದರೆ, ಭದ್ರತಾ ಕಾರಣದಿಂದ ಟೂರ್ನಿಯನ್ನು ಬಾಂಗ್ಲಾದೇಶದಿಂದ ಬೇರೆ ದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟೂರ್ನಿ ಸ್ಥಳಾಂತರಗೊಂಡರೆ ಭಾರತದಲ್ಲಿ ನಡೆಯಲಿದೆ ಎನ್ನಲಾಗಿದೆ. ಸದ್ಯ ಸೇನೆ ಢಾಕಾದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

ಇದನ್ನೂ ಓದಿ ICC Women’s T20 World Cup 2024: ಮಹಿಳಾ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಶ್ರೀಲಂಕಾ

ಹಿಂಸಾತ್ಮಕ ಪ್ರತಿಭಟನೆ ಏಕೆ?

ಬಾಂಗ್ಲಾದೇಶದಲ್ಲಿ ಮೀಸಲಾತಿ ಕಾರಣಕ್ಕಾಗಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. 1971ರಲ್ಲಿ ನಡೆದ ಬಾಂಗ್ಲಾದೇಶ ಹೋರಾಟದಲ್ಲಿ ಭಾಗಿಯಾದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಮೀಸಲಾತಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆಯೂ ನಡೆದ ಹಿಂಸಾತ್ಮಕ ಹೋರಾಟದಲ್ಲಿ ನೂರಾರು ಜನ ಮೃತಪಟ್ಟಿದ್ದರು.

ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೇಳುತ್ತಲೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌, ಶೇ.30ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಆದರೆ, ಸಂಪೂರ್ಣವಾಗಿ ಮೀಸಲಾತಿಯನ್ನು ರದ್ದುಗೊಳಿಸುವ ಬದಲು ಶೇ.5ರಷ್ಟು ಮೀಸಲಾತಿ ಮುಂದುವರಿಸಿದೆ. ಸಂಪೂರ್ಣವಾಗಿ ಮೀಸಲಾತಿ ರದ್ದುಗೊಳಿಸಬೇಕು ಎಂದು ಜನರ ಆಗ್ರಹವಾಗಿದ್ದು, ಇದಕ್ಕಾಗಿ ಪ್ರತಿಭಟನೆ ಆರಂಭವಾಗಿದೆ. ಪ್ರತಿಭಟನೆಗೆ ಪ್ರತಿಪಕ್ಷಗಳೂ ಬೆಂಬಲ ನೀಡಿದ್ದು, ಶೇಖ್‌ ಹಸೀನಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅದರಂತೆ, ಶೇಖ್‌ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ.

ಹಿಂದೂಗಳ ಮೇಲೆ ದಾಳಿ

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Exit mobile version