Site icon Vistara News

Women’s T20 World Cup: ಕಣ್ಣೀರಿಟ್ಟ ಹಾಲಿ ನಾಯಕಿಯನ್ನು ಸಂತೈಸಿದ ಮಾಜಿ ನಾಯಕಿ

womens-t20-world-cup-former-captain-comforts-tearful-defending-captain

womens-t20-world-cup-former-captain-comforts-tearful-defending-captain

ಕೇಪ್​ಟೌನ್​: ಜ್ವರದಿಂದ ಬಳಲುತ್ತಿದ್ದ ನಡುವೆಯೂ ನಾಯಕಿ ಹರ್ಮನ್​ಪ್ರೀತ್​ ಕೌರ್ ಪ್ರದರ್ಶಿಸಿದ​ ದಿಟ್ಟ ಬ್ಯಾಟಿಂಗ್​ ಹೊರತಾಗಿಯೂ ಭಾರತ ತಂಡ ಮಹಿಳೆಯರ ಟಿ20 ವಿಶ್ವ ಕಪ್(Women’s T20 World Cup)​ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ರನ್​ಗಳ ಸೋಲು ಕಂಡು ವಿಶ್ವ ಕಪ್​ ಅಭಿಯಾನ ಅಂತ್ಯಗೊಳಿಸಿದೆ.

ಸೋಲಿನ ಬಳಿಕ ಭಾವುಕರಾದ ನಾಯಕಿ ಹರ್ಮನ್​ಪ್ರೀತ್​ ಕೌರ್(Harmanpreet Kaur) ಕಣ್ಣೀರು ಸುರಿಸುತ್ತಾ ಡ್ರೆಸಿಂಗ್​ ರೋಮ್​ಗೆ ತೆರಳುತ್ತಿದ್ದರು. ಇದೇ ವೇಳೆ ಕೌರ್​ ಬಳಿ ಧಾವಿಸಿದ ​ಟೀಮ್​ ಇಂಡಿಯಾದ ಮಾಜಿ ನಾಯಕಿ ಅಂಜುಮ್ ಚೋಪ್ರಾ(Anjum Chopra) ಅವರು ಕೌರ್​ ಅವರನ್ನು ತಬ್ಬಿಕೊಂಡು ಸಂತೈಸಿ ಧೈರ್ಯ ತುಂಬಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೌರ್​ ಅವರನ್ನು ಸಮಧಾನ ಪಡಿಸಿದ ಬಳಿಕ ಟಿವಿ ನಿರೂಪಕಿ, ಭಾರತ ಕ್ರಿಕೆಟ್‌ ತಂಡದ ಖ್ಯಾತ ವೇಗಿ ಜಸ್​ಪ್ರೀತ್​ ಬುಮ್ರಾ ಪತ್ನಿ ಸಂಜನಾ ಗಣೇಶನ್ ಅವರ ಜತೆ ಮಾತನಾಡಿದ ​ಅಂಜುಮ್ ಚೋಪ್ರಾ, ಈ ಪಂದ್ಯದಲ್ಲಿ ಬಹುಶಃ ಹರ್ಮನ್‌ಪ್ರೀತ್ ಆಡುವುದು ಅಸಾಧ್ಯವಾಗಿತ್ತು. ಆದರೆ ವಿಶ್ವ ಕಪ್‌ನ ಸೆಮಿಫೈನಲ್ ಪಂದ್ಯವಾಗಿದ್ದರಿಂದ ಅವರು ಆಡಿದ್ದರು. ಅವರ ದಿಟ್ಟ ಹೋರಾಟಕ್ಕೆ ಮೆಚ್ಚಲೇ ಬೇಕು ಎಂದು ಶ್ಲಾಘಿಸಿದರು.

ಇದನ್ನೂ ಓದಿ Women’s T20 World Cup: ಅಂದು ಧೋನಿ, ಇಂದು ಕೌರ್​ ರನೌಟ್​; ಮತ್ತೊಮ್ಮೆ ಸೆಮಿಯಲ್ಲಿ ಎಡವಿದ ಭಾರತ

‘ಹರ್ಮನ್‌ಪ್ರೀತ್ ಕೌರ್ ಯಾವತ್ತು ಹಿಂದೆ ಸರಿಯುವವರಲ್ಲ. ಅನಾರೋಗ್ಯದ ನಡುವೆಯೂ ಈ ಪಂದ್ಯಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಂಡ ರೀತಿ ಎಲ್ಲರಿಗೂ ಮಾದರಿ. ಪಂದ್ಯ ಸೋತರು ಅವರು ದೇಶದ ಮನಗೆದ್ದಿದ್ದಾರೆ. ನಾನು ಅವರ ದುಃಖವನ್ನು ಕಡಿಮೆ ಮಾಡಲು ಮಾತ್ರ ಬಯಸಿದ್ದೆ’ ಎಂದು ಅಂಜುಮ್ ಚೋಪ್ರಾ ಹೇಳಿದರು.

Exit mobile version