ಕೇಪ್ಟೌನ್: ಗುರುವಾರ ನಡೆದ ವನಿತಾ ಟಿ20 ವಿಶ್ವ ಕಪ್ ಸೆಮಿಫೈನಲ್(Women’s T20 World Cup) ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು 5 ರನ್‌ಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಸೋಲಿನ ಬಳಿಕ ಹರ್ಮನ್ಪ್ರೀತ್ ಕೌರ್ ನನ್ನ ದೇಶ ನಾನು ಅಳುವುದನ್ನು ನೋಡಲು ಬಯಸುವುದಿಲ್ಲ ಎಂದು ಹೇಳಿ ಭಾವುಕರಾದರು.
ಕೇಪ್ಟೌನ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಭರ್ಜರಿ ಮೊತ್ತವನ್ನು ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ 8 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿ ಕೇವಲ 5 ರನ್ ಅಂತರದಿಂದ ಸೋಲು ಕಂಡಿತು.
ಚೇಸಿಂಗ್ ವೇಳೆ ಭರ್ಜರಿ ಅರ್ಧಶತಕ ಸಿಡಿಸಿ ಭಾರತಕ್ಕೆ ಗೆಲುವಿನ ಆಸೆ ಹುಟ್ಟಿಸಿದ್ದ ನಾಯಕಿ ಹರ್ಮನ್ ನಿರ್ಣಾಯಕ ಹಂತದಲ್ಲಿ ರನೌಟಾದರು. 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 52 ರನ್ ಚಚ್ಚಿದರು. ಆದರೂ ಪಂದ್ಯವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಪಂದ್ಯ ಸೋತ ಬಳಿಕ ಪ್ರೆಸೆಂಟೇಶನ್ನಲ್ಲಿ ಮಾತನಾಡುವ ವೇಳೆ ಹರ್ಮನ್ಪ್ರೀತ್ ಕೌರ್ ಕಪ್ಪು ಕನ್ನಡಕವನ್ನು ಧರಿಸಿ ಬಂದಿದ್ದರು. ಇದೇ ವೇಳೆ ಅವರು ‘ನಾನು ಅಳುವುದನ್ನು ನನ್ನ ದೇಶ ನೋಡುವುದು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಈ ಕನ್ನಡಕವನ್ನು ಧರಿಸಿದ್ದೇನೆ ಭಾವುಕರಾದರು. ಈ ಸೋಲು ನಮ್ಮಗೆ ಒಂದು ರೀತಿಯ ಪಾಠವಾಗಿದೆ. ಮುಂದಿನ ಟೂರ್ನಿಯಲ್ಲಿ ನಮ್ಮ ಆಟವನ್ನು ಸುಧಾರಿಸುತ್ತೇವೆ” ಎಂದರು.