ಢಾಕಾ: ಬಹುನಿರೀಕ್ಷಿತ ಮಹಿಳಾ ಟಿ20 ವಿಶ್ವಕಪ್ ಟೂರ್ನಿ(Women’s T20 World Cup) ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಬಾಂಗ್ಲಾದೇಶದಲ್ಲಿ(bangladesh violence) ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳು ಹಿಂಸಾತ್ಮಕ ರೂಪ ತಳೆದಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶದಲ್ಲಿನ ಭದ್ರತೆ ಪರಿಸ್ಥಿತಿಯ ಬಗ್ಗೆ ಗಮನ ಹರಿಸುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಹೇಳಿದೆ.
ಒಂದೊಮ್ಮೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸದೇ ಹೋದರೆ, ಭದ್ರತಾ ಕಾರಣದಿಂದ ಟೂರ್ನಿಯನ್ನು ಬಾಂಗ್ಲಾದೇಶದಿಂದ ಬೇರೆ ದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟೂರ್ನಿ ಸ್ಥಳಾಂತರಗೊಂಡರೆ ಭಾರತದಲ್ಲಿ ನಡೆಯಲಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಢಾಕಾದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿದ್ದಾರೆ. ಕೆಲವರು ಪೊಲೀಸ ಮೇಲೆಯೇ ದಾಳಿ ನಡೆಸುತ್ತಿರುವ ವಿಡಿಯೊಗಳು ಕೂಡ ವೈರಲ್ ಆಗುತ್ತಿದೆ. ಇದುವರೆಗೆ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ (Bangladesh Protests) ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ (Job Reservation) ನೀಡುವ ನಿಯಮವನ್ನು ಕೋರ್ಟ್ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದೇ ಕಾರಣಕ್ಕೆ ಇಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಏನಿದು ವಿವಾದ?
1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರು ಮತ್ತು ಹೋರಾಟಗಾರರ ಸಂಬಂಧಿಕರಿಗೆ ಉದ್ಯೋಗಗಳಲ್ಲಿ ಶೇ. 30ರಷ್ಟು ಮೀಸಲಾತಿ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ನೂರಾರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ತಿಂಗಳಿನಿಂದ ರ‍್ಯಾಲಿಗಳನ್ನು ಪ್ರಾರಂಭಿಸಿದರು. ಶಾಂತವಾಗಿಯೇ ನಡೆಯುತ್ತಿದ್ದ ಪ್ರತಿಭಟನೆಕಾರರ ಮೇಲೆ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತರೂಢ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದರು. ಆ ಬಳಿಕ ಪ್ರತಿಭಟನೆ ಹಿಂಸೆಯ ರೂಪ ತಾಳಿತು.
ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿರುವ ಕಾರಣ ಸುಮಾರು 1,000ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. 778 ಭಾರತೀಯರು ಭೂಮಾರ್ಗದಲ್ಲಿ ತಾಯ್ನೆಲಕ್ಕೆ ಬಂದು ಸೇರಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಮಾನದಲ್ಲಿ ಮರಳಿದ್ದಾರೆ.
ಈ ಪ್ರತಿಭಟನೆಯ ಹಿಂದೆ ರಾಜಕೀಯದ ಛಾಯೆಯೂ ಇದೆ. 1971ರ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದುದು ಶೇಖ್ ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ ಪಕ್ಷ. ಈಗ ಪ್ರಧಾನಿ ಆಗಿರುವ ಶೇಖ್ ಹಸೀನಾ ಇವರ ಮಗಳು. ಹಾಗಾಗಿ ಅವಾಮಿ ಲೀಗ್‌ನ ಬೆಂಬಲಿಗರಿಗೆ ಮಾತ್ರ ಈ ಮೀಸಲಾತಿಯಿಂದ ಲಾಭ ಆಗುತ್ತದೆ ಎನ್ನುವುದು ಪ್ರತಿಪಕ್ಷಗಳ ಆರೋಪ.