ಕೇಪ್ಟೌನ್: ಮಹಿಳೆಯರ ಟಿ20 ವಿಶ್ವ ಕಪ್ನ(Women’s T20 World Cup) ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 52 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್(Richa Ghosh) ಅವರ ಸ್ಫೋಟಕ ಬ್ಯಾಟಿಂಗ್ ಈ ಪಂದ್ಯದ ಹೈಲೈಟ್ಸ್ ಆಗಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ವನಿತೆಯರು 8 ವಿಕೆಟ್ಗೆ 131 ರನ್ ಗಳಿಸಿ ಸೋಲು ಕಂಡಿತು. ಕಳೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಕೇವಲ 85 ರನ್ಗಳಿಗೆ ಆಲ್ಔಟ್ ಆಗಿ ಹೀನಾಯ ಸೋಲು ಕಂಡಿತ್ತು. ಆದರೆ ಬಾಂಗ್ಲಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಮತ್ತೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ರಿಚಾ ಘೋಷ್ ಈ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಕೊನೆಯ 10 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು 6,1,6,6,1,6,1,6,6,1.. ಹೀಗೆ ರನ್ ಕಲೆ ಹಾಕಿದರು. ಬೌಲಿಂಗ್ನಲ್ಲಿ ದೇವಿಕಾ ವೈದ್ಯ ಎರಡು ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ Women’s World Cup : ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 44 ರನ್ ಹೀನಾಯ ಸೋಲು
ಫೆ. 10 ರಿಂದ ಟೂರ್ನಿಯ ಲೀಗ್ ಪಂದ್ಯಗಳು ಆರಂಭವಾಗಲಿದೆ. ಭಾರತ ತಂಡ ಮೊದಲ ಪಂದ್ಯ ಫೆ.12ಕ್ಕೆ ಪಾಕಿಸ್ತಾನ ವಿರುದ್ಧ ಆಡಲಿದೆ.