ಕೇಪ್ಟೌನ್: ಆಶ್ಲೀಗ್ ಗಾರ್ಡ್ನರ್(ashleigh gardner) ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್ ತಂಡ ವನಿತೆಯರ ಟಿ20 ವಿಶ್ವಕಪ್‌ನಲ್ಲಿ(Women’s T20 World Cup) ಆಸ್ಟ್ರೇಲಿಯಾ ವಿರುದ್ಧ 97 ರನ್ಗಳ ಹೀನಾಯ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಆಸೀಸ್ ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 173 ರನ್ ಬಾರಿಸಿತು. ಜವಾಬಿತ್ತ ನ್ಯೂಜಿಲ್ಯಾಂಡ್ 14 ಓವರ್‌ಗಳಲ್ಲಿ ಕೇವಲ 76 ರನ್ಗೆ ಸರ್ವಪತನ ಕಂಡಿತು.
ಆಶ್ಲೀಗ್ ಗಾರ್ಡ್ನರ್ ಅವರು ವೃತ್ತಿಜೀವನದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಕೇವಲ 12 ರನ್ ಬಿಟ್ಟುಕೊಟ್ಟು ಪ್ರಮುಖ 5 ವಿಕೆಟ್ ಕಿತ್ತು ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್ನಲ್ಲಿ ಮಿಂಚಿದ ಅಲಿಸ್ಸಾ ಹೀಲಿ (55), ಮೆಗ್ ಲ್ಯಾನಿಂಗ್(41) ಮತ್ತು ಆಲ್ರೌಂಡರ್ ಎಲಿಸೆ ಪೆರ್ರಿ 40 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.
ಇದನ್ನೂ ಓದಿ Women’s T20 World Cup: ಶ್ರೀಲಂಕಾ ವಿರುದ್ಧ ಮೂರು ರನ್ ಅಂತರದಿಂದ ಸೋಲು ಕಂಡ ದಕ್ಷಿಣ ಆಫ್ರಿಕಾ
ದಿನದ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡ 7 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 7 ವಿಕೆಟ್ಗೆ 135 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 14.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 23ರನ್ಗೆ ಮೂರು ವಿಕೆಟ್ ಕಿತ್ತು ಮಿಂಚಿದರು.