ಕೇಪ್ಟೌನ್: ಮಹಿಳೆಯರ ಟಿ20 ವಿಶ್ವ ಕಪ್(Women’s T20 World Cup) ಪಂದ್ಯಾವಳಿಯ 3ನೇ ಮುಖಾಮುಖಿಯಲ್ಲಿ ಭಾರತ ತಂಡ ಪ್ರಬಲ ಇಂಗ್ಲೆಂಡ್ ವಿರುದ್ಧ 11 ರನ್ನುಗಳಿಂದ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ರಿಚಾ ಘೋಷ್(Richa Ghosh) ಹಿಡಿದ ಒಂದು ಕ್ಯಾಚ್ನ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ(ಫೆ.18) ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 7 ವಿಕೆಟಿಗೆ 151 ರನ್ ಪೇರಿಸಿದರೆ, ಭಾರತ 5ಕ್ಕೆ 140 ರನ್ ಮಾಡಿ ಸೋಲು ಕಂಡಿತು. ಇಂಗ್ಲೆಂಡ್ ಈ ಗೆಲುವಿನೊಂದಿಗೆ ‘ಬಿ’ ವಿಭಾಗದಿಂದ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಗೊಳಿಸಿದೆ.
ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ವೇಳೆ ರೇಣುಕಾ ಸಿಂಗ್ ಅವರ ಮೊದಲ ಓವರ್ನ ಮೂರನೇ ಎಸೆತದಲ್ಲೇ ಇಂಗ್ಲೆಂಡ್ ಬ್ಯಾಟರ್ ಡೇನಿಯಲ್ ವ್ಯಾಟ್ ವಿಕೆಟ್ ಕೀಪರ್ ರಿಚಾಗೆ ಕ್ಯಾಚ್ ನೀಡಿ ಔಟಾದರು. ಘೋಷ್ ಹಿಡಿದ ಕ್ಯಾಚ್ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಬಲ ಭಾಗಕ್ಕೆ ಡೈವ್ ಬಿದ್ದು ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ದಂಗಾಗಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಚಾ ಘೋಚ್ ಅವರು ಹಿಡಿದ ಈ ಡೈವಿಂಗ್ ಕ್ಯಾಚ್ ಕಂಡ ನೆಟ್ಟಿಗರು ಎಂ.ಎಸ್ ಧೋನಿ ಅವರನ್ನು ಮತ್ತೆ ನೆನಪಿಸಿದ್ದೀರ ಎಂದು ಕಮೆಂಟ್ ಮಾಡಿದ್ದಾರೆ. ಜತೆಗೆ ಧೋನಿ ಇದೀ ರೀತಿ ಹಿಡಿದ ಕ್ಯಾಚ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ 2019 ಐಸಿಸಿ ಏಕ ದಿನ ವಿಶ್ವಕಪ್ನ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ಕೂಡ ಇದೇ ರೀತಿಯಲ್ಲಿ ಕ್ಯಾಚ್ ಹಿಡಿದಿದ್ದರು. ಇದೀಗ ಅಭಿಮಾನಿಗಳು ರಿಚಾ ಘೋಷ್ ಹಿಡಿದ ಕ್ಯಾಚನ್ನು ಧೋನಿಗೆ ಹೋಲಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ ICC Women’s T20 World Cup : ಭಾರತದ ವನಿತೆಯರಿಗೆ ಇಂಗ್ಲೆಂಡ್ ವಿರುದ್ಧ 11 ರನ್ ಸೋಲು
ಐಸಿಸಿ ಕೂಡ ರಿಚಾ ಘೋಷ್ ಅವರ ಕ್ಯಾಚ್ ವಿಡಿಯೊವನ್ನು ತನ್ನ ಅಧಿಕೃತ ಟ್ವಿಟರ್ ಝಾತೆಯಲ್ಲಿ ಹಂಚಿಕೊಂಡು ಅಬ್ಬಾ..ಎಂತಹ ಅದ್ಭುತ ಕ್ಯಾಚ್ ಎಂದು ಬರೆದುಕೊಂಡಿದೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ರಿಚಾ ಘೋಷ್ ಧೋನಿಯಂತೆ ಸಿಕ್ಸರ್ ಸಿಡಿಸಿ ಸುದ್ದಿಯಾಗಿದ್ದರು. ಸದ್ಯ ಅವರು ಟೀಮ್ ಇಂಡಿಯಾ ಪರ ಕಿಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಧೋನಿಯಂತೆ ಯಶಸ್ಸು ಸಾಧಿಸುತ್ತಿದ್ದಾರೆ.