ಕೇಪ್ಟೌನ್: ಐಸಿಸಿ ಮಹಿಳೆಯರ ಟಿ20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಗೆ(Women’s T20 World Cup) ಚಾಲನೆ ದೊರೆದಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಸೋಲು ಕಂಡಿದೆ. ಆದರೆ ಭಾರತ ತಂಡ(team india) ಪಂದ್ಯಾವಳಿಯಲ್ಲಿ ಕಣಕ್ಕಿಳಿಯುವ ಮೊದಲೇ ಆಘಾತವೊಂದಕ್ಕೆ ಸಿಲುಕಿದೆ. ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ(smriti mandhana) ಪಾಕಿಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಎಡಗೈ ನಡುಬೆರಳಿಗೆ ಗಾಯ ಮಾಡಿಕೊಂಡಿದ್ದ ಮಂಧಾನಾ ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಅವರು ಪಾಕಿಸ್ತಾನ ವಿರುದ್ಧ ಭಾನುವಾರ(ಫೆ.12) ನಡೆಯುವ ಮೊದಲ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ. ಇನ್ನೊಂದೆಡೆ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್(harmanpreet kaur) ಅವರ ಫಿಟ್‌ನೆಸ್ ಕೂಡ ಚಿಂತೆಗೆ ಕಾರಣವಾಗಿದೆ.
ಇದನ್ನೂ ಓದಿ Women’s T20 World Cup: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ 52 ರನ್ ಗೆಲುವು
ದಕ್ಷಿಣ ಆಫ್ರಿಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ವೇಳೆ ಅವರು ಭುಜದ ನೋವಿಗೆ ಒಳಗಾಗಿದ್ದ ಕೌರ್ ವಿಶ್ವ ಕಪ್ ಟೂರ್ನಿಯ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಿಂದ ದೂರ ಉಳಿದಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ತಾನು ಸಂಪೂರ್ಣವಾಗಿ ಫಿಟ್ ಇದ್ದೇನೆ ವಿಶ್ರಾಂತಿ ಸಲುವಾಗಿ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂದು ಹೇಳಿದ್ದರು. ಒಂದೊಮ್ಮೆ ಪಂದ್ಯದ ಮಧ್ಯೆ ಮತ್ತೆ ನೋವು ಕಾಣಿಸಿಕೊಂಡು ತಂಡದಿಂದ ಬೇರ್ಪಟ್ಟರೆ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.