ಕೇಪ್‌ಟೌನ್: ಮೂರು ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಎಸೆದ ಥ್ರೋಗೆ ಧೋನಿ ರನೌಟ್ ಆಗುವ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನವಾಗಿತ್ತು. ಇದೀಗ ಮಹಿಳಾ ಟಿ20 ವಿಶ್ವ ಕಪ್ನಲ್ಲಿಯೂ(Women’s T20 World Cup) ಇಂತಹದ್ದೇ ಘಟನೆ ನಡೆದಿದೆ.
ಕೇಪ್ಟೌನ್ನಲ್ಲಿ ಗುರುವಾರ(ಫೆ.23) ನಡೆದ ವನಿತಾ ಟಿ20 ವಿಶ್ವ ಕಪ್ನ(Women’s T20 World Cup) ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು 5 ರನ್‌ಗಳಿಂದ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಗೆಲುವಿನ ಹಾದಿಯಲ್ಲಿದ್ದ ಟೀಮ್ ಇಂಡಿಯಾ ಉತ್ತಮವಾಗಿ ಆಡುತ್ತಿದ್ದ ನಾಯಕಿ ಹರ್ಮಾನ್‌ಪ್ರೀತ್ ಕೌರ್ ರನೌಟ್ ಆಗುವುದರೊಂದಿಗೆ ಭಾರತದ ಫೈನಲ್ ಕನಸು ಕೂಡ ಭಗ್ನವಾಯಿತು.
ಇದನ್ನೂ ಓದಿ Women’s T20 World Cup: ನಾನು ಅಳುವುದನ್ನು ನನ್ನ ದೇಶ ನೋಡಲು ಬಯಸುವುದಿಲ್ಲ; ಹರ್ಮನ್ಪ್ರೀತ್ ಕೌರ್
ಅಂದು 2019ರಲ್ಲಿ ನಡೆದ ಪುರುಷರ ಏಕದಿನ ವಿಶ್ವ ಕಪ್ ಸೆಮಿಫೈನಲ್ನಲ್ಲಿ ಧೋನಿ ರನೌಟ್ ಆಗುವ ಮೂಲಕ ಭಾರತದ ವಿಶ್ವ ಕಪ್ ಅಭಿಯಾನ ಅಂತ್ಯಕಂಡಿತ್ತು. ಇದೀಗ ಮಹಿಳಾ ಕ್ರಿಕೆಟ್ನಲ್ಲಿಯೂ ಭಾರತಕ್ಕೆ ಇದೇ ರೀತಿಯ ನಿರಾಸೆಯಾಗಿದೆ. ಧೋನಿ ಮತ್ತು ಹರ್ಮನ್ ಪ್ರೀತ್ ಕೌರ್ ರನೌಟ್ ಆದ ವಿಡಿಯೊವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮತ್ತೊಮ್ಮೆ ಭಾರತೀಯರ ಹೃದಯ ಒಡೆದು ಹೋಗಿದೆ ಎಂದು ಬರೆದಿದ್ದಾರೆ. ಐಸಿಸಿಯೂ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಧೋನಿ ಮತ್ತು ಕೌರ್ ರನೌಟ್ ಆಗುವ ವಿಡಿಯೊವನ್ನು ಹಂಚಿಕೊಂಡಿದ್ದು ಈ ರನೌಟ್ನಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಒಡೆದುಹೋದಂತಾಗಿದೆ ಎಂದು ಬರೆದುಕೊಂಡಿದೆ.