ಬೆನೋನಿ: ಆರಂಭಿಕ ಬ್ಯಾಟರ್ ಶ್ವೇತಾ ಸೆಹ್ರಾವತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೊಚ್ಚಲ ಆವೃತ್ತಿಯ 19ರ ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ(Womens U19 T20 World Cup) ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿ ಗೆಲುವಿನ ಶುಭಾರಂಭ ಕಂಡಿದೆ.
ಶನಿವಾರ ನಡೆದ ‘ಡಿ’ ವಿಭಾಗದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ಗೆ 166 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡ ಸೆಹ್ರಾವತ್ ಅವರ ಅಜೇಯ 92 ರನ್ ಮತ್ತು ನಾಯಕಿ ಶಫಾಲಿ ವರ್ಮಾ ಅವರ ಸ್ಫೋಟಕ ಆಟದಿಂದಾಗಿ 16.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 170 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಸೀನಿಯರ್ ತಂಡದಲ್ಲಿ ಟಿ20 ವಿಶ್ವ ಕಪ್ ಆಡಿರುವ “ಲೇಡಿ ಸೆಹವಾಗ್’ ಖ್ಯಾತಿಯ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೇವಲ 16 ಎಸೆತಗಳಿಂದ 45(9 ಬೌಂಡರಿ ಮತ್ತು 1 ಸಿಕ್ಸರ್) ರನ್ ಸಿಡಿಸಿದ ಅವರು ಮೊದಲ ವಿಕೆಟಿಗೆ ಶ್ವೇತಾ ಅವರೊಂದಿಗೆ 77 ರನ್ ಒಟ್ಟುಗೂಡಿಸಿದರು. ಜತೆಗೆ ಬೌಲಿಂಗ್‌ನಲ್ಲಿಯೂ ಮಿಂಚುವ ಮೂಲಕ ಎರಡು ವಿಕೆಟ್ ಉರುಳಿಸಿ ಗಮನ ಸೆಳೆದರು. ಉಪನಾಯಕಿ ಶ್ವೇತಾ ಸೆಹ್ರಾವತ್ 57 ಎಸೆತ ಎದುರಿಸಿದ ಬರೋಬ್ಬರಿ 20 ಬೌಂಡರಿ ಬಾರಿಸುವ ಮೂಲಕ ಅಜೇಯ 92 ರನ್ ಸಿಡಿಸಿದರು. ಭಾರತ ಮುಂದಿನ ಪಂದ್ಯದಲ್ಲಿ ಯುಎಇ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯ ಜನವರಿ 16(ಸೋಮವಾರ) ರಂದು ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ವನಿತೆಯರು: 5 ವಿಕೆಟಿಗೆ 166 (ಸಿಮೋನ್ ಲಾರೆನ್ಸ್ 61, ಮ್ಯಾಡಿಸನ್ ಲ್ಯಾಂಡ್ಸ್‌ಮನ್ 32, ಶಫಾಲಿ ವರ್ಮ 31ಕ್ಕೆ 2);
ಭಾರತ ವನಿತೆಯರು: 16.3 ಓವರ್‌ಗಳಲ್ಲಿ 3 ವಿಕೆಟಿಗೆ 170 (ಶ್ವೇತಾ ಸೆಹ್ರಾವತ್ 92 ಔಟಾಗದೆ, ಶಫಾಲಿ ವರ್ಮ 45). ಪಂದ್ಯಶ್ರೇಷ್ಠ: ಶ್ವೇತಾ ಸೆಹ್ರಾವತ್
ಇದನ್ನೂ ಓದಿ | Indian Cricket Team | ತಿರುವನಂತಪುರದ ಪದ್ಮನಾಭಸ್ವಾಮಿ ದೇಗುಲಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರರು ಭೇಟಿ