ನವದೆಹಲಿ: ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(women’s world boxing championship) ಭಾರತದ ಬಾಕ್ಸರ್ಗಳಾದ ನೀತು, ಪ್ರೀತಿ ಮತ್ತು ಮಂಜು ಪ್ರಿ-ಕ್ವಾರ್ಟರ್ ಫೈನಲ್ ತಲುಪಿ ಪದಕ ಭರವಸೆಯೊಂದನ್ನು ಮೂಡಿಸಿದ್ದಾರೆ.
48 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಭಾರತದ ನೀತು ಗಂಘಾಸ್(Nitu Ganghas) ಅವರು ಕೊರಿಯಾದ ಡೊಯೇನ್ ಕಾಂಗ್ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟರು. 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರೀತಿ ರೊಮೇನಿಯಾದ ಲಾಕ್ರಾಮಿಯೋರಾ ಪೆರಿಜೊಕ್ ವಿರುದ್ಧ ಜಯ ಸಾಧಿಸಿದರು. ಮಂಜು ಬಂಬೋರಿಯಾ (66ಕೆಜಿ) ನ್ಯೂಜಿಲ್ಯಾಂಡ್‌ನ ಕಾರಾ ವರೆರಾ ಅವರನ್ನು 5-0 ಅಂತರದಿಂದ ಮಣಿಸಿದರು.
ನೀತು ಅವರು ಮೊದಲ ಸುತ್ತಿನ ಬೌಟ್‌ನಲ್ಲಿ ಕೊರಿಯಾದ ಡೊಯೆನ್ ಕಂಗ್ ಎದುರು ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಗೆದ್ದರು. ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದ ನೀತು ಈ ಬೌಟ್‌ನಲ್ಲಿ ಬಲಿಷ್ಠ ಪಂಚ್‌ಗಳ ಮೂಲಕ ಪ್ರಾಬಲ್ಯ ಮರೆದರು. ಇವರ ಪಂಚ್ಗಳಿಗೆ ಎದುರಾಳಿ ಕಂಗೆಟ್ಟರು.
ಇದನ್ನೂ ಓದಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಮೇರಿ ಕೋಮ್, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ
ಪ್ರೀತಿ ಮತ್ತು ಲಾಕ್ರಾಮಿಯೋರಾ ಪೆರಿಜೊಕ್ ವಿರುದ್ಧದ ಪಂದ್ಯವೂ ರೋಚಕವಾಗಿ ಸಾಗಿತ್ತು. ಈ ಜಿದ್ದಾಜಿದ್ದಿನ ಕಾಳಗದಲ್ಲಿ ಒಂದು ಹಂತದಲ್ಲಿ 2-3ರಿಂದ ಹಿನ್ನಡೆಯಲ್ಲಿದ್ದ ಪ್ರೀತಿ ಬಳಿಕ ನಿಖರ ಪಂಚ್‌ಗಳ ಮೂಲಕ ಪುಟಿದೆದ್ದು ಅಂತಿಮವಾಗಿ 4-3 ಅಂಕಗಳಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ಸು ಕಂಡರು.