ಬುಡಾಪೆಸ್ಟ್ (ಹಂಗೇರಿ): ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಚಿನ್ನದ ಹುಡುಗ ನೀರಜ್ ಚೋಪ್ರಾ(Neeraj Chopra) ಅವರು ಇಂದು ನಡೆಯುವ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಇಂದು ಮಧ್ಯಾಹ್ನ 1:40 ಕ್ಕೆ ನಿಗದಿಪಡಿಸಲಾದ ಗುಂಪು A ಕ್ವಾಲಿಫೈಯರ್‌ನಲ್ಲಿ ಅವರು ಜಾವೆಲಿನ್ ಎಸೆಯಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಸೇರಿ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ ಈ ಬಾರಿ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಠ ಪ್ರದರ್ಶನದೊಂದಿಗೆ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು. ಈ ಟೂರ್ನಿಯಲ್ಲಿ ಭಾರತ ಕೇವಲ ಎರಡು ಪದಕ ಮಾತ್ರ ಗೆದ್ದಿದೆ. 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ಪಡೆದಿದ್ದರು. ಇದಾದ ಬಳಿಕ ಕಳೆದ ವರ್ಷ ನೀರಜ್ ಅವರು ದ್ವಿತೀಯ ಪದಕ ಗೆದ್ದಿದ್ದರು.
ಭಾನುವಾರ ಫೈನಲ್
ಒಟ್ಟು 27 ಜಾವೆಲಿನ್ ಎಸೆತಗಾರರನ್ನು ಎ ಮತ್ತು ಬಿ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಆಯ್ಕೆಯಾಗುವ 12 ಮಂದಿ ಭಾನುವಾರದಂದು ನಿಗದಿಯಾಗಿರುವ ಫೈನಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಫೈನಲ್ ಪ್ರವೇಶಿಸಲು 83.00 ಮೀ. ಅರ್ಹತಾ ಅಂಕ ಪಡೆಯಬೇಕಿದೆ. ಇದೇ ವರ್ಷ ಏಷ್ಯನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಮನು ಕೂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಮೊಬ್ಬ ಭಾರತೀಯ ಜೆನಾ ಬಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಮೂವರು ಭಾರತಿಯರು ಈ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್, ಲಂಡನ್ನ 2012ರ ಒಲಿಂಪಿಕ್ ಚಾಂಪಿಯನ್ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್, ಜರ್ಮನಿಯ ವಿಶ್ವದ ನಂ. 2 ಜೂಲಿಯನ್ ವೆಬರ್ ಅವರಂತಹ ಘಟಾನುಘಟಿಗಳು ಕಾಣಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ಧತೆ
ಲಾಸನ್ನಲ್ಲಿ ಕಳೆದ ವರ್ಷ ನಡೆದ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ 89.04 ದೂರ ಜಾವೆಲಿನ್ ಎಸೆದಿದ್ದರು. ಇದು ಅವರ ಇದುವರೆಗೆ ಅತ್ಯುತ್ತಮ ಸಾಧನೆಯಾಗಿದೆ. ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ ಸಿದ್ಧತೆ ಮಾಡಿಕೊಳ್ಳುವುದು ಅವರ ಯೋಜನೆಯಾಗಿದೆ.
ಇದನ್ನೂ ಓದಿ Neeraj Chopra : ಚಿನ್ನದ ಹುಡುಗ ನೀರಜ್ಗೆ ಗಾಯದ ಬಾಧೆ, ಏನಾಯಿತು ಅವರಿಗೆ?
90 ಮೀ. ಗುರಿ
ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 90 ಮೀ. ದೂರ ಜಾವೆಲಿನ್ ಎಸೆಯುವುದು ನನ್ನ ಪ್ರಮುಖ ಗುರಿ ಎಂದು ಈಗಾಗಲೇ ನೀರಜ್ ಚೋಪ್ರಾ ಹೇಳಿದ್ದಾರೆ. ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಮೇ 29ರಂದು ನೆದರ್ಲೆಂರ್ಡ್ಸ್ನಲ್ಲಿ ನಡೆದಿದ್ದ ಎಫ್ಬಿಕೆ ಗೇಮ್ಸ್ ಮತ್ತು ಜೂನ್ 13ರಂದು ಫಿನ್ಲೆಂಡ್ನಲ್ಲಿ ನಡೆದ ಪಾವೋ ನುರ್ಮಿ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ ಜುಲೈನಲ್ಲಿ ನಡೆದ ಲೌಸನ್ನೆ ಚರಣರದ ಡೈಮಂಡ್ ಲೀಗ್‌ನಲ್ಲಿ(Lausanne Diamond League) ಚಿನ್ನ ಗೆದ್ದಿದ್ದರು.