Site icon Vistara News

ಮುಂದಿನ ವರ್ಷ ಕೇರಳದಲ್ಲಿ ನಡೆಯಲಿದೆ ಭಾರತ-ಅರ್ಜೆಂಟೀನಾ ಫುಟ್ಬಾಲ್​ ಪಂದ್ಯ

Lionel Messi

ಕೊಚ್ಚಿ: ಕಳೆದ ಒಂದು ವರ್ಷಗಳಿಂದ ಕೇಳಿ ಬರುತ್ತಿದ್ದ ಅರ್ಜೆಂಟೀನಾ ಫುಟ್ಬಾಲ್ ತಂಡದ(argentina vs india football) ಭಾರತ ಪ್ರವಾಸಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಂತಿದೆ. ಕೇರಳದಲ್ಲಿ ಕೆಲವು ಸೌಹಾರ್ದ ಪಂದ್ಯಗಳನ್ನು ಆಡಲು ಅರ್ಜೆಂಟೀನಾ ಫುಟ್ಬಾಲ್​ ಅಸೋಸಿಯೇಶನ್(ಎಎಫ್ಎ) ತನ್ನ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕಳುಹಿಸಿಕೊಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಅರ್ಜೆಂಟೀನಾ ಫುಟ್ಬಾಲ್​ ಅಸೋಸಿಯೇಶನ್ ಅಧಿಕಾರಿಗಳೊಂದಿಗೆ ಆನ್​ಲೈನ್​ ಸಭೆಯಲ್ಲಿ ಭಾಗವಹಿಸಿದ ಕೇರಳದ ಕ್ರೀಡಾ ಸಚಿವ ಅಬ್ದುರಹಿಮಾನ್(V. Abdurahiman) ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಕಳೆದ ವರ್ಷವೇ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಕೇರಳದಲ್ಲಿ ಸೌಹಾರ್ದ ಪಂದ್ಯ ಆಡಲಿದೆ ಎಂದು ಸಿಎಂ ಪಿಣರಾಯ್​ ವಿಜಯನ್​(Pinarayi Vijayan) ಅವರು ಮೆಸ್ಸಿ ಅವರ ಜೆರ್ಸಿಯನ್ನು ಹಿಡಿದು ಅರ್ಜೆಂಟೀನಾ ತಂಡ ಕೇರಳಕ್ಕೆ ಬರುವ ವಿಚಾರವನ್ನು ತಿಳಿಸಿದ್ದರು.

ಇದೇ ವಿಚಾರವಾಗಿ ಮಾತನಾಡಿದ್ದ ಸಚಿವ ವಿ.ಅಬ್ದುರಹಿಮಾನ್, ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಭಾರತಕ್ಕೆ ಬರುವುದು ಬಹುತೇಕ ಖಚಿತವಾಗಿ ಈಗಾಗಲೇ ಎಲ್ಲ ಮಾತುಕತೆಗಳು ಮುಕ್ತಾಯಗೊಂಡಿದೆ. ಪಂದ್ಯಕ್ಕೆ ಖರ್ಚಾಗುವ ಎಲ್ಲ ಹಣವನ್ನು ಕೇರಳ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎನ್ನುವುದನ್ನು ಹೇಳಿರಲಿಲ್ಲ. ಇದೀಗ 2025ರ ಅಕ್ಟೋಬರ್ನಲ್ಲಿ ರಾಜ್ಯದಲ್ಲಿ ಅರ್ಜೆಂಟೀನಾ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯ ಕುರಿತು ಚಿಂತಿಸುತ್ತಿದ್ದೇವೆ ಎಂದಿದ್ದಾರೆ.

“ಈ ಸೌಹಾರ್ದ ಪಂದ್ಯ ಆಯೋಜನೆ ಅಷ್ಟು ಸುಲಭವಲ್ಲ. ಆದರೆ, ಇದು ಕೇರಳದ ಫುಟ್ಬಾಲ್ ಪ್ರೇಮಿಗಳಿಗೆ ಒಂದು ಕೊಡುಗೆಯಾಗಲಿದೆ. ಕೇರಳದಲ್ಲಿ ಅರ್ಜೆಂಟೀನಾ ತಂಡಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ನೆಚ್ಚಿನ ತಂಡ ಆಡುವುದನ್ನು ನೋಡಲು ನಮ್ಮ ಜನರು ತೋರುತ್ತಿರುವ ಉತ್ಸಾಹ ನಮ್ಮನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಿದೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ Lionel Messi: ಲಿಯೋನೆಲ್ ಮೆಸ್ಸಿಯ ಜೆರ್ಸಿ ನಿವೃತ್ತಿ ಮಾಡಲು ಎಎಫ್​ಎ ನಿರ್ಧಾರ!

ಕೇರಳದಲ್ಲಿ ಏಕೆ ಪಂದ್ಯ?


ಭಾರತದಲ್ಲಿ ಸೌಹಾರ್ದ ಪಂದ್ಯ ಆಡುವ ಕುರಿತು ಅರ್ಜೆಂಟೀನಾ ಫುಟ್ಬಾಲ್​ ಫೆಡರೇಶನ್ ಕಳೆದ ವರ್ಷ​ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಇದನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ ತಿರಸ್ಕರಿಸಿತ್ತು. ಇದೇ ವಿಚಾರವಾಗಿ ಸ್ಪಷ್ಟಣೆ ನೀಡಿದ್ದ ವ್ಯವಸ್ಥಾಪಕ ಕಾರ್ಯದರ್ಶಿ ಶಾಜಿ ಪ್ರಭಕರನ್‌, ಅರ್ಜೆಂಟೀನಾ ತಂಡವು ಭಾರತೀಯ ಫುಟ್ಬಾಲ್ ಆಡಳಿತ ಸಂಸ್ಥೆಯ ಬಳಿ ಸ್ನೇಹಾರ್ಥ ಪಂದ್ಯ ಆಡುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ ಈ ಪಂದ್ಯ ಆಯೋಜನೆಗೆ ಭಾರಿ ಹಣದ ಅವಶ್ಯಕತೆ ಇರುವುದರಿಂದಾಗಿ, ಅರ್ಜೆಂಟೀನಾದ ಮನವಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದರು. ಇದೇ ವೇಳೆ ಕೇರಳ ಸರ್ಕಾರ ಈ ಪಂದ್ಯವನ್ನು ನಡೆಸುವ ನಿರ್ಧಾರ ಕೈಗೊಂಡಿತ್ತು.

ಕೇರಳದಲ್ಲಿ ಫುಟ್ಬಾಲ್​ ಕ್ರೇಜ್​ ಕ್ರಿಕೆಟ್​ಗಿಂತ ಹೆಚ್ಚು. ಅದರಲ್ಲೂ ಮೆಸ್ಸಿ ಅವರಿಗಂತೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ. 2022ರಲ್ಲಿ ಕತಾರ್​ ಫಿಫಾ ವಿಶ್ವ ಕಪ್​ ವೇಳೆ ಸಾಗರದ ಆಳದಲ್ಲಿ ಮೆಸ್ಸಿಯ ಕಟೌಟ್ ನಿಲ್ಲಿಸಿದ್ದು ಭಾರಿ ಸುದ್ದಿಯಾಗಿತ್ತು. ಅರ್ಜೆಂಟೀನಾ ತಂಡಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಸ್ವತಃ ಮೆಸ್ಸಿ ಅವರೇ ಟ್ವೀಟ್​ ಮೂಲಕ ಕೇರಳದ ಜನತೆಗೆ ಧನ್ಯವಾದ ತಿಳಿಸಿದ್ದರು. ಇದೀಗ ನೆಚ್ಚಿನ ಆಟಗಾರ ತಮ್ಮ ತವರಿಗೆ ಬರುತ್ತಿದ್ದಾರೆ ಎನ್ನುವ ವಿಷಯ ತಿಳಿದಿರುವ ಕೇರಳದ ಜನತೆಯಲ್ಲಿ ಸಂಭ್ರಮ ಮನೆ ಮಾಡಿದೆ.

Exit mobile version