ಬೆಂಗಳೂರು: ಮುಂದಿನ ತಿಂಗಳು ಸೆಪ್ಟೆಂಬರ್ 16ರಿಂದ 24ರ ವರೆಗೆ ಸರ್ಬಿಯಾದಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ(World Championships) ಪಾಲ್ಗೊಳ್ಳುವ ಭಾರತೀಯ ಕುಸ್ತಿಪಟುಗಳು ಭಾರತದ ಹೆಸರು ಮತ್ತು ಧ್ವಜ ಬಳಸುವಂತಿಲ್ಲ. ತಟಸ್ಥ ಸ್ಪರ್ಧಿಗಳಾಗಿ ಕಣಕ್ಕಿಳಿಯಬೇಕಿದೆ. ಇದಕ್ಕೆ ಕಾರಣ ಡಬ್ಲ್ಯುಎಫ್‌ಐ (WFI) ಸದಸ್ಯತ್ವ ನಿಷೇಧಕ್ಕೊಳಗಾಗಿರುವುದು(wfi membership suspended).
ಸ್ಪರ್ಧೆಗೆ ಅಡ್ಡಿಯಿಲ್ಲ
ನಿಗದಿತ ಸಮಯಕ್ಕೆ ಕುಸ್ತಿ ಒಕ್ಕೂಟಕ್ಕೆ ಚುನಾವಣೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ವನ್ನು ವಿಶ್ವ ಕುಸ್ತಿ ಸಂಸ್ಥೆ(United World Wrestling) ಗುರುವಾರ ಅಮಾನತುಗೊಳಿಸಿತ್ತು. ಹೀಗಾಗಿ ಭಾರತೀಯ ಕುಸ್ತಿಪಟುಗಳು ಭಾರತದ ಧ್ವಜ ಬಳಸುವಂತಿಲ್ಲ. ತಟಸ್ಥವಾಗಿಯೇ ಸ್ಪರ್ಧೆ ನಡೆಸಬೇಕಿದೆ. ಕುಸ್ತಿ ಒಕ್ಕೂಟ ನಿಷೇಧಗೊಂಡರೂ ಆಟಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಬ್ರಿಜ್ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರು ಲೈಂಗಿಕ ಕಿರುಕುಳದ ಆರೋಪ ಹೊತ್ತು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ವಿಶ್ವ ಕುಸ್ತಿ ಸಂಸ್ಥೆ ಸೂಚನೆ ನೀಡಿತ್ತು. ಅದರಂತೆ ಏಪ್ರಿಲ್ 27ರಂದು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ)ಯು ಡಬ್ಲ್ಯುಎಫ್‌ಐಗೆ ತಾತ್ಕಾಲಿಕ ಸಮಿತಿ ನೇಮಿಸಿ 45 ದಿನಗಳಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಬಳಿಕ ಏಪ್ರಿಲ್ 28ಕ್ಕೆ ವಿಶ್ವ ಕುಸ್ತಿ ಸಂಸ್ಥೆಯು ನಿಗದಿತ ಸಮಯಕ್ಕೆ ಚುನಾವಣೆ ನಡೆಸದಿದ್ದರೆ ಡಬ್ಲ್ಯುಎಫ್‌ಐಗೆ ನಿಷೇಧಿಸುವುದಾಗಿ ಎಚ್ಚರಿಸಿತ್ತು.
ಮತ್ತೆ ಮತ್ತೆ ವಿಫಲ
ವಿಶ್ವ ಕುಸ್ತಿ ಸಂಸ್ಥೆ ನೀಡಿದ ನಿರ್ದೇಶನದಂತೆ ಚುನಾವಣೆ ನಡೆಸಲು ಡಬ್ಲ್ಯುಎಫ್‌ಐ ಸಿದ್ಧತೆ ನಡೆಸಿತ್ತು. ಜುಲೈ 11ಕ್ಕೆ ಚುನಾವಣೆಯನ್ನು ನಿಗದಿ ಮಾಡಿತ್ತು. ಆದರೆ ಗುವಾಹಟಿ ಹೈಕೋರ್ಟ್ ತಡೆ ನೀಡಿದ ಕಾರಣಂದಿಂದ ಚುನಾವಣೆ ಮುಂದೂಡಿಕೆಯಾಗಿ ಆಗಸ್ಟ್ 12ಕ್ಕೆ ಮತ್ತೆ ಮರು ನಿಗದಿಯಾಯಿತು. ಇನ್ನೇನು ಚುನಾವಣೆ ನಡೆಯಲು ಒಂದು ದಿನ ಬಾಕಿ ಇರುವಾಗ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಈ ಚುನಾವಣೆಗೆ ತಡೆ ನೀಡಿತ್ತು. ಚುನಾವಣೆ ನಡೆಸಲು ವಿಫಲವಾದ ಡಬ್ಲ್ಯುಎಫ್‌ಐ ವಿರುದ್ಧ ಅಸಾಮಾಧಾನಗೊಂಡ ವಿಶ್ವ ಕುಸ್ತಿ ಭಾರತದ ಕುಸ್ತಿ ಸಂಸ್ಥೆಯ ಸದಸ್ಯತ್ವವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿತು.
ಇದನ್ನೂ ಓದಿ Wrestling Federation of India: ಭಾರತದ ಕುಸ್ತಿ ಫೆಡರೇಶನ್ ಸದಸ್ಯತ್ವ ರದ್ದು
ಒಲಿಂಪಿಕ್ಸ್ಗೆ ಏನು ಗತಿ
ಭಾರತದ ಕುಸ್ತಿ ಸಂಸ್ಥೆಯ ಸದಸ್ಯತ್ವವನ್ನು ವಾಪಸ್ ಪಡೆದುಕೊಳ್ಳಲಿದ್ದರೆ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ ಸ್ಪರ್ಧೆಯಲ್ಲಿಯೂ ಭಾರತೀಯ ಕುಸ್ತಿಪಟುಗಳು ತಟಸ್ಥ ಧ್ವಜದಡಿಯಲ್ಲಿ ಸ್ಪರ್ಧೆ ನಡೆಸಬೇಕು. ಇಲ್ಲಿಯೂ ಭಾರತದ ಹೆಸರು ಮತ್ತು ಧ್ವಜವನ್ನು ಬಳಸುವಂತಿಲ್ಲ. ಹೀಗಾಗಿ ಆದಷ್ಟೂ ಬೇಗ ಚುನಾವಣೆ ನಡೆಸಿ ಈ ಸಮಸ್ಯೆಯನ್ನು ಭಾರತದ ಕುಸ್ತಿ ಒಕ್ಕೂಟ ಪರಿಹರಿಸಬೇಕಿದೆ.
ಕುಸ್ತಿಪಟುಗಳ ಪ್ರತಿಭಟನೆ
ಈ ಹಿಂದೆ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬಿಜೆಪಿ ಸಂದಸರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರ ವಿರುದ್ಧ ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್, ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಆರು ಅಗ್ರ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಸರಿ ಸುಮಾರು 2 ತಿಂಗಳುಕಾಲ ಪ್ರತಿಭಟನೆ ನಡೆಸಿದ್ದರು. ಈ ಕಾರಣದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು.