Site icon Vistara News

World Chess Championship: ಡಿ.ಗುಕೇಶ್‌-ಲಿರೆನ್‌ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

World Chess Championship

ಲಾಸೆನ್‌: ಫಿಡೆ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಘಟಾನುಘಟಿ ಚೆಸ್‌ ಪಟುಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದು, ವಿಶ್ವ ಚಾಂಪಿಯನ್‌ ಎನಿಸಿಕೊಳ್ಳಲು ಕಾತರದಿಂದ ಕಾಯುತ್ತಿರುವ ಭಾರತದ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್‌(Gukesh D) ಮತ್ತು ಚೀನಾದ ಡಿಂಗ್‌ ಲಿರೆನ್‌(Ding Liren) ನಡುವಿನ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌(World Chess Championship) ಪಂದ್ಯ ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಯಲಿದೆ. ಭಾರತದಿಂದ ಈ ವರೆಗೂ ವಿಶ್ವನಾಥನ್‌ ಆನಂದ್ ಮಾತ್ರ ವಿಶ್ವ ಚಾಂಪಿಯನ್‌ ಆಗಿದ್ದಾರೆ. ಅವರು 5 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ತಡರಾತ್ರಿ ಕೆನಡಾದ ಟೊರೊಂಟೊದಲ್ಲಿ ನಡೆದ ಮುಕ್ತ ವಿಭಾಗದ 14 ಹಾಗೂ ಕೊನೆ ಸುತ್ತಿನ ಹಣಾಹಣಿಯಲ್ಲಿ ಗುಕೇಶ್‌ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಗುಕೇಶ್‌ ಅಂಕ ಗಳಿಕೆಯನ್ನು 9ಕ್ಕೆ ಹೆಚ್ಚಿಸಿ ಅಗ್ರಸ್ಥಾನ ಕಾಯ್ದುಕೊಂಡರು. ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಹಾಗೂ ಫ್ಯಾಬಿಯಾನೊ ಕರುನಾ ನಡುವಿನ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಗುಕೇಶ್‌ ಚಾಂಪಿಯನ್‌ ಎನಿಸಿಕೊಂಡಿದ್ದರು.

ಟೂರ್ನಿಯಲ್ಲಿ ಗೆಲ್ಲುವ ಮೂಲಕ ಗುಕೇಶ್‌ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದರು. ಗುಕೇಶ್‌ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ರಷ್ಯಾದ ದಿಗ್ಗಜ ಚೆಸ್‌ ಪಟು ಗ್ಯಾರಿ ಕಾಸ್ಪರೋವ್‌ ಅವರ ದಾಖಲೆಯನ್ನು ಮುರಿದರು. ಕಾಸ್ಪರೋವ್‌ 1984ರಲ್ಲಿ ತಮ್ಮ 22ನೇ ವರ್ಷದಲ್ಲಿ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದಿದ್ದರು. ಇದು ಈವರೆಗಿನ ಟೂರ್ನಿಯ ಇತಿಹಾಸವಾಗಿತ್ತು. ಆದರೆ ಗುಕೇಶ್‌ 17ನೇ ವಯಸ್ಸಿಗೆ ಚಾಂಪಿಯನ್​ ಆಗುವ ಮೂಲಕ ಕಾಸ್ಪರೋವ್‌ ದಾಖಲೆ ಮುರಿದರು.

ಇದನ್ನೂ ಓದಿ D Gukesh: 17ನೇ ವಯಸ್ಸಿಗೇ ‘ಚೆಸ್‌ ಕ್ಯಾಂಡಿಡೇಟ್ಸ್‌’ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಗುಕೇಶ್!

ಮಗನ ಸಾಧನೆಗೆ ತಂದೆ-ತಾಯಿಯ ಅಪಾರ ತ್ಯಾಗ


ಡಿ.ಗುಕೇಶ್‌ ಅವರ ಸಾಧನೆಯ ಹಿಂದೆ ಅವರ ತಂದೆಯ ಅಪಾರ ಶ್ರಮವಿದೆ. ಮಗನ ಚೆಸ್​ ಸಾಧನೆಗೆ ಯಾವುದೇ ಅಡೆತಡೆ ಉಂಟಾಗಬಾರದೆಂದು ತಂದೆ ತಂದೆ ಡಾ.ರಜನೀಕಾಂತ್‌(Rajinikanth) ಅವರು ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು. ಪೋಷಕರ ತ್ಯಾಗ ಮತ್ತು ಶ್ರಮಕ್ಕೆ ಇಂದು ಗುಕೇಶ್‌ ಚೆಸ್​ನಲ್ಲಿ ಮಿಂಚುವ ಮೂಲಕ ಅವರಿಗೂ ಕೀರ್ತಿ ತಂದಿದ್ದಾನೆ. 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದ ಗುಕೇಶ್‌, ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ 2ನೇ ಭಾರತೀಯ ಎಂಬ ಕೀರ್ತಿಯೂ ಅವರದ್ದಾಗಿದೆ. ವಿಶ್ವನಾಥನ್‌ ಆನಂದ್‌ ಮೊದಲಿಗ. ಅವರು 2014ರಲ್ಲಿ ಕ್ಯಾಂಡಿಡೇಟ್ಸ್‌ ಪ್ರಶಸ್ತಿ ಗೆದ್ದಿದ್ದರು.

ಹೌದು, ಬಾಲ್ಯದಲ್ಲೇ ಚೆಸ್‌ ಮೇಲೆ ಒಲವು ಹೊಂದಿದ್ದ ಗುಕೇಶ್‌ಗೆ ಕೋಚಿಂಗ್‌, ಟೂರ್ನಿಯ ಸಿದ್ಧತೆ, ಪ್ರಯಾಣಕ್ಕಾಗಿ ಪೋಷಕರು ಆರ್ಥಿಕ ಸಮಸ್ಯೆ ಎದುರಿಸಿದ್ದರು. ಆದರೆ, ಮಗನ ಸಾಧನೆಗೆ ಹಣಕಾಸಿನ ಕೊರತೆ ಅಡ್ಡಿಯಾಗಬಾರದೆಂದು ತಂದೆ ಡಾ.ರಜನೀಕಾಂತ್‌, ತಾಯಿ ಪದ್ಮಾ ದೃಢನಿರ್ಧಾರ ಕೈಗೊಂಡಿದ್ದರು. ಹಣ ಹೊಂದಿಸಲು ಕ್ರೌಂಡ್‌ ಪಂಡಿಂಗ್ ಕೂಡಾ ನಡೆಸಿದ್ದರು. ಇದು ಮಾತ್ರವಲ್ಲದೆ ಗುಕೇಶ್‌ ಜತೆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗುವ ಕಾರಣಕ್ಕಾಗಿ ಅವರ ತಂದೆ 2017-18ರಲ್ಲಿ ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು.

Exit mobile version