Site icon Vistara News

ICC World Cup: ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ಟಾಪ್​ 5 ಬೌಲರ್​ಗಳು

Hat-Tricks in ODI World Cup History

ಬೆಂಗಳೂರು: ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್​(ICC World Cup) ಟೂರ್ನಿ ಆರಂಭಕ್ಕೆ ಇನ್ನು ಒಂದು ವಾರಗಳು ಮಾತ್ರ ಬಾಕಿ ಉಳಿದಿವೆ. ಭಾರತದ ಆತಿಥ್ಯದಲ್ಲಿ ನಡೆಯುವ ಈ ಮಹತ್ವದ ಟೂರ್ನಿ ಅಕ್ಟೋಬರ್​ 5 ರಿಂದ ಮೊದಲ್ಗೊಂಡು ನವೆಂಬರ್​ 19ರ ತನಕ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ಮುಖಾಮುಖಿಯಾಗಲಿವೆ. ಉದ್ಘಾಟನ ಮತ್ತು ಫೈನಲ್​ ಪಂದ್ಯಗಳೆರಡು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದುವರೆಗಿನ ವಿಶ್ವಕಪ್​ ಟೂರ್ನಿಯಲ್ಲಿ ಹ್ಯಾಟ್ರಿಕ್(Hat-tricks in ODI World Cup)​ ವಿಕೆಟ್​ ಪಡೆದ ಆಟಗಾರರ ಮಾಹಿತಿ ಇಂತಿದೆ.

ಚೇತನ್​ ಶರ್ಮ

ಚೇತನ್‌ ಶರ್ಮ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮೊದಲ ಕ್ರಿಕೆಟಿಗ. 1987ರ ವಿಂಡೀಸ್​ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. ಭಾರತ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಅವರು ಇತ್ತೀಚೆಗೆ ಖಾಸಗಿ ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ತಂಡ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಈ ಸ್ಥಾನದಿಂದ ಕೆಳಗಿಳಿದ್ದರು.


ಮೊಹಮ್ಮದ್ ಶಮಿ

ಪ್ರಚಂಡ ಬೌಲಿಂಗ್​ ಫಾರ್ಮ್​ನಲ್ಲಿರುವ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ಅವರು ಕೂಡ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ. ಲಂಡನ್​ನಲ್ಲಿ ನಡೆದ 2019 ವಿಶ್ವಕಪ್​ನಲ್ಲಿ ಶಮಿ ಅವರು ಅಫಘಾನಿಸ್ತಾನ ವಿರುದ್ಧ ಈ ಸಾಧನೆಗೈದಿದ್ದರು. ಮೊಹಮ್ಮದ್ ನಬಿ, ಅಫ್ತಾಬ್ ಆಲಂ ಹಾಗೂ ಮುಜೀಬ್ ಉರ್ ರೆಹಮಾನ್ ವಿಕೆಟ್​ ಕಡೆವಿದ್ದರು. ಈ ಬಾರಿಯ ವಿಶ್ವಕಪ್​ನಲ್ಲಿಯೂ ಶಮಿ ಸ್ಥಾನ ಪಡೆದಿದ್ದಾರೆ.


ಬ್ರೆಟ್ ಲೀ

ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್​ ಲೀ 2003ರ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದರು. ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಕೆನಡಿ ಒಟಿನೊ, ಬ್ರಿಜೆಲ್ ಪಟೇಲ್ ಹಾಗೂ ಡೇವಿಡ್ ಒಬಿಯಾ ಅವರನ್ನು ಪೆವಿಲಿಯನ್​ಗೆ ಅಟ್ಟಿ ಈ ಸಾಧನೆ ಮಾಡಿದ್ದರು. ಈ ಟೂರ್ನಿಯಲ್ಲಿ ಆಸೀಸ್​ ವಿಶ್ವಕಪ್​ ಗೆದ್ದು ಸಂಭ್ರಮಿಸಿತ್ತು.

ಇದನ್ನೂ ಓದಿ ICC World Cup 2023: ವಿಶ್ವಕಪ್​ಗೂ ಮುನ್ನ ಲಂಕಾ ತಂಡಕ್ಕೆ ಆಘಾತ; ಗಾಯದಿಂದ ಸ್ಟಾರ್​ ಆಲ್​ರೌಂಡರ್ ಔಟ್​


ಲಸಿತ್ ಮಾಲಿಂಗ

ಶ್ರೀಲಂಕಾ ತಂಡದ ಮಾಜಿ ಯಾರ್ಕರ್​ ಕಿಂಗ್​ ಲಸಿತ್​ ಮಾಲಿಂಗ ಅವರು ಎರಡು ಬಾರಿ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​​ ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸತತ 4 ಎಸೆತಗಳಲ್ಲಿ ಶಾನ್ ಪೊಲಾಕ್, ಆಂಡ್ರೆ ಹಾಲ್, ಜಾಕ್‌ ಕಾಲಿಸ್ ಹಾಗೂ ಮಕಾಯ ಎನ್ಟಿನಿ ವಿಕೆಟ್ ಪಡೆದು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇದಾದ ಬಳಿಕ 2011ರಲ್ಲಿ ಕೀನ್ಯಾ ವಿರುದ್ಧ ತನ್ಮಯ್ ಮಿಶ್ರಾ, ಪೀಟರ್ ಒಗಂಡೊ, ಶೆಮ್ ನಗೊಚೆ ಅವರ ವಿಕೆಟ್‌ಗಳನ್ನು ಪಡೆದು ಎರಡನೇ ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.


ಸಕ್ಲೇನ್ ಮುಷ್ತಾಕ್

ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರು 1999ರ ಸಾಲಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ವಿಶ್ವಕಪ್​ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಕ್ಲೇನ್ ಅವರು ಹೆನ್ರಿ ಓಲಾಂಗ, ಆಡಮ್ ಹಕಲ್ ಮತ್ತು ಪೊಮ್ಮಿ ಬಂಗ್ವಾ ವಿಕೆಟ್​ ಕೆಡವಿ ಈ ಸಾಧನೆ ತೋರಿದ್ದರು.

Exit mobile version