ಕೋಲ್ಕೊತಾ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(World Cup 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯುವ ಭಾರತ ಮತ್ತು ನೆದರ್ಲೆಂಡ್ಸ್(India vs Netherlands) ವಿರುದ್ಧದ ಪಂದ್ಯ ಕೊನೆಯ ಲೀಗ್ ಪಂದ್ಯವಾಗಿದೆ. ಇದಾದ ಬಳಿಕ ನ.15 ಮತ್ತು 16ರಂದು ಸೆಮಿಫೈನಲ್ ಹಾಗೂ ನ.19ರಂದು ಫೈನಲ್ ನಡೆಯಲಿದೆ. ಫೈನಲ್ಗೆ ಸರಿಯಾಗಿ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿವೆ. ಲೀಗ್ನಲ್ಲಿ ಸೋತ ತಂಡಗಳಿಗೆ ಸಿಕ್ಕ ಪ್ರೋತ್ಸಾಹ ಧನದ ಮಾಹಿತಿ ಇಂತಿದೆ.
ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತವೆಷ್ಟು?
ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡಕ್ಕೆ 40 ಲಕ್ಷ ಅಮೆರಿಕನ್ ಡಾಲರ್ (ಅಂದಾಜು 33 ಕೋಟಿ ರೂ) ಬಹುಮಾನ ಮೊತ್ತ ನೀಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಈಗಾಗಲೇ ಘೋಷಿಸಿದೆ. ರನ್ನರ್-ಅಪ್ ಆಗುವ ತಂಡಕ್ಕೆ 20 ಲಕ್ಷ ಅಮೆರಿಕನ್ ಡಾಲರ್(ಅಂದಾಜು 16 ಕೋಟಿ ರೂ.) ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋಲುವ 2 ತಂಡಗಳಿಗೆ ತಲಾ 6 ಕೋಟಿ ರೂಪಾಯಿ, ನಾಕೌಟ್ ಹಂತಕ್ಕೆ ಪ್ರವೇಶಿಸಲು ವಿಫಲವಾಗುವ 6 ತಂಡಗಳಿಗೆ ತಲಾ 82 ಲಕ್ಷ ರು. ಪ್ರೋತ್ಸಾಹ ಧನ ಸಿಗಲಿದೆ. ಇನ್ನು ಗುಂಪು ಹಂತದಲ್ಲಿ ಪ್ರತಿ ಗೆಲುವಿಗೆ ತಂಡಗಳಿಗೆ ತಲಾ 33 ಲಕ್ಷ ರು. ಬಹುಮಾನ ಮೊತ್ತ ಸಿಗಲಿದೆ.
ಬದ್ಧ ವೈರಿ ಪಾಕ್ಗೆ ಸಿಕ್ಕ ಮೊತ್ತವೆಷ್ಟು?
ಟೂರ್ನಿ ಆರಂಭಕ್ಕೂ ಮುನ್ನ ನಾವೇ ಬಲಿಷ್ಠ, ಈ ಬಾರಿ ಕಪ್ ನಮ್ಮದೆ ಎಂದು ಜಂಭ ಕೊಚ್ಚಿಕೊಂಡಿದ್ದ ಭಾರತದ ಬದ್ಧ ವೈರಿ ಪಾಕಿಸ್ತಾನ ತಂಡ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳನ್ನು ಗೆದ್ದು 5ನೇ ಸ್ಥಾನಿಯಾಗಿ ಟೂರ್ನಿಯನ್ನು ಕೊನೆಗೊಳಿಸಿತು. ಪಾಕ್ನ ಈ ಪ್ರದರ್ಶನಕ್ಕೆ ಬರೋಬ್ಬರಿ 2,60,000 ಡಾಲರ್, ಅಂದರೆ 7,33,41,580 ಪಾಕಿಸ್ತಾನಿ ರೂಪಾಯಿಗಳನ್ನು ಪಾವತಿಸಲಾಗುತ್ತದೆ. 2,60,000 ಡಾಲರ್ ಅನ್ನು ಭಾರತದ ರೂ. ಪರಿಗಣಿಸಿದರೆ 2.16 ಕೋಟಿ ರೂ. ಸಿಗಲಿದೆ. ಪಾಕ್ ತಂಡ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ 1,60,000 ಡಾಲರ್‌ಗಳನ್ನು ಮತ್ತು ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಕ್ಕಾಗಿ 1,00,000 ಡಾಲರ್‌ಗಳು ಪಾಕಿಸ್ತಾನ ತಂಡಕ್ಕೆ ಸಿಗಲಿದೆ.
ಇದನ್ನೂ ಓದಿ Viral Video: ಅಫ್ರಿದಿ ಜತೆಗಿನ ಸಂಭ್ರಮಾಚರಣೆ ತಡೆದ ಬಾಬರ್ ಅಜಂ
ಅಧಿಕ ಪ್ರಸಂಗತನ ತೋರಿದ್ದ ಪಾಕ್
ಭಾರತಕ್ಕೆ ವಿಶ್ವ ಕಪ್ಗಾಗಿ ಬರುವ ಮೊದಲು ಪಾಕಿಸ್ತಾನ ತಂಡ ಸಿಕ್ಕಾಪಟ್ಟೆ ಅಧಿಕ ಪ್ರಸಂಗತನ ಮಾಡಿತ್ತು. ಇಲ್ಲಿಗೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಆರಂಭದಲ್ಲಿ ಹೇಳಿದ್ದರೆ, ಬಳಿಕ ಆ ಮೈದಾನದಲ್ಲಿ ಆಡುವುದಿಲ್ಲ, ಈ ಮೈದಾನದಲ್ಲಿ ಆಡುವುದಿಲ್ಲ ಎಂದೆಲ್ಲ ರಗಳೆ ಮಾಡಿತ್ತು. ಕೊನೆಯಲ್ಲಿ ಅನಿವಾರ್ಯವಾಗಿ ಬರಲೇಬೇಕಾಯಿತು. ಈ ವೇಳೆ ಭಾರತದಲ್ಲಿ ನಾವು ವಿಶ್ವ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಹುಂಬತನದ ಮಾತು ಆಡಿತ್ತು. ಇದೀಗ ಐದನೇ ಸ್ಥಾನ ಪಡೆದು ತವರಿಗೆ ಮರಳುವಂತಾಗಿದೆ.
ಸೋಲು ಕಂಡ ಪಾಕ್
ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿತು. ಬಜ್ಬಾಲ್ ತಂತ್ರದೊಂದಿಗೆ ಆಡಿದ ಜೋಸ್ ಬಟ್ಲರ್ ಪಡೆ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ಬಳಗ 43.3 ಓವರ್ಗಳಲ್ಲಿ 244 ರನ್ಗಳಿಗೆ ಆಲ್ಔಟ್ ಆಯಿತು. ಅದರಲ್ಲೂ ಕೊನೇ ವಿಕೆಟ್ಗೆ ರವೂಫ್ (35) ಮತ್ತು ಹಾಗೂ ವಾಸಿಮ್ (16) ಸೇರಿಕೊಂಡು 53 ರನ್ಗಳ ಜತೆಯಾಟವಾಡಿದ ಕಾರಣ ತಂಡದ ಮರ್ಯಾದೆ ಸ್ವಲ್ಪ ಮಟ್ಟಿಗೆ ಉಳಿಯಿತು. ಇಲ್ಲದಿದ್ದರೆ 100ಕ್ಕಿಂತಲೂ ಅಧಿಕ ರನ್ಗಳಿಂದ ಸೋಲು ಕಾಣುತ್ತಿತ್ತು. ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 287 ರನ್ಗಳ ಅಂತರದಿಂದ ಸೋಲಿಸಿದ್ದರೆ ಸೆಮಿಫೈನಲ್ ಅವಕಾಶವಿತ್ತು. ಅದಕ್ಕಾಗಿ ಪಾಕ್ ತಂಡ ಟಾಸ್ ಗೆಲ್ಲಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅಲ್ಲಿಗೆ ಪಾಕ್ ಅವಕಾಶ ಕೊನೆಗೊಂಡಿತ್ತು.