ವೆಲ್ಲಿಂಗ್ಟನ್: ಏಕದಿನ ವಿಶ್ವಕಪ್‌ಗೆ(ICC World Cup 2023) ನ್ಯೂಜಿಲ್ಯಾಂಡ್ ತಂಡ ಪ್ರಕಟಗೊಂಡಿದೆ. ಆದರೆ ತಂಡ ನಾಯಕ ಕೇನ್ ವಿಲಿಯಮ್ಸನ್(Kane Williamson) ನಾನು ಸಂಪೂರ್ಣ ಫಿಟ್ ಆಗಿಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಕಿವೀಸ್ ತಂಡಕ್ಕೆ ಚಿಂತೆಗೀಡು ಮಾಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬುಧವಾರ ಕಿವೀಸ್ ತಂಡ(New Zealand Team) ಭಾರತ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಿಲಿಯಮ್ಸನ್ ಮೊಣಕಾಲಿನ ಗಾಯದಿಂದ ತಾನು ಇನ್ನೂ ಸಂಪೂರ್ಣ ಗುಣಮುಖವಾಗಿಲ್ಲ. ಅಲ್ಲದೆ ಕ್ರಿಕೆಟ್ ಆಡದೆ ಸುಮಾರು 5 ತಿಂಗಳು ಕಳೆದಿದೆ. ಅಭ್ಯಾಸ ಪಂದ್ಯಗಳಲ್ಲಿ ಆಡಿ ನನ್ನ ಫಾರ್ಮ್ ಕಂಡುಕೊಳ್ಳುವ ವಿಶ್ವಾಸವಿದೆ ಎಂದರು. ವಿಲಿಯಮ್ಸನ್ ಮಾತ್ರವಲ್ಲದೆ ಗಾಯದ ಸಮಸ್ಯೆ ಎದುರಿಸುತ್ತಿರುವ ಬೌಲರ್ ಟಿಮ್ ಸೌಥಿ ಕೂಟ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಕಿವೀಸ್ ಈ ಬಾರಿ ಪ್ರಮುಖ ಆಟಗಾರರ ಗಾಯದ ಆತಂಕದಲ್ಲೇ ಕಣಕ್ಕಿಳಿಯಲಿದೆ.
ಐಪಿಎಲ್ ವೇಳೆ ಗಂಭೀರ ಗಾಯ
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಕೇನ್ ವಿಲಿಯಮ್ಸನ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಉದ್ಘಾಟನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(gujarat titans) ಪರ ಫೀಲ್ಡಿಂಗ್ ಮಾಡುವ ವೇಳೆ ಕೇನ್ ವಿಲಿಯಮ್ಸನ್ ಗಾಯಕ್ಕೆ ಒಳಗಾಗಿದ್ದರು. ಋತುರಾಜ್ ಗಾಯಕ್ವಾಡ್ ಬಾರಿಸಿದ ಚೆಂಡನನ್ನು ಬೌಂಡರಿ ಗೆರೆಯ ಬಳಿ ತಡೆಯಲು ವಿಲಿಯಮ್ಸನ್ ಮೇಲಕ್ಕೆ ಜಿಗಿದಿದ್ದರು. ಚೆಂಡನ್ನು ತಡೆದು ಎದುರಾಳಿ ತಂಡ ಆರು ರನ್ಗಳು ಸಂಗ್ರಹಿಸದಂತೆ ನೋಡಿಕೊಂಡ ಹೊರತಾಗಿಯೂ ಅವರು ಕಳಕ್ಕೆ ಬೀಳುವಾಗ ಮಂಡಿಯೂರಿದ್ದರು. ಮಂಡಿ ಜೋರಾಗಿ ನೆಲಕ್ಕೆ ಅಪ್ಪಳಿಸಿದ ಅವರು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರು ತವರಿಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಅಭ್ಯಾಸ ಪಂದ್ಯದಲ್ಲಿ ಪಾಕ್ ಎದುರಾಳಿ
ನ್ಯೂಜಿಲ್ಯಾಂಡ್ ತಂಡ ಸೆಪ್ಟೆಂಬರ್ 29ರಂದು ಪಾಕಿಸ್ತಾನ ವಿರುದ್ಧ ಅಭ್ಯಾಸ ಪಂದ್ಯ ಆಡುವ ಮೂಲಕ ವಿಶ್ವಕಪ್‌ಗೆ ತಯಾರಿ ನಡೆಸಲಿದೆ. ಟೂರ್ನಿ ಆರಂಭವಾಗುವ ಅಕ್ಟೋಬರ್ 5ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 2015 ಮತ್ತು 2019ರಲ್ಲಿ ವಿಶ್ವಕಪ್ ಫೈನಲ್ ಪ್ರವೇಶ ಪಡೆದ ಕಿವೀಸ್ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಬಾರಿ ಕಪ್ ಗೆಲ್ಲುವ ವಿಶ್ವಾಸವಿದ್ದರೂ ಮೊದಲು ಗಾಯದ ಸಮಸ್ಯೆಯನ್ನು ಮೀರಿ ನಿಲ್ಲಬೇಕಿದೆ.
ಪ್ರಮುಖ ಬೌಲರ್ಗಳಾದ ಕೈಲ್ ಜೇಮಿಸನ್ ಮತ್ತು ಆಡ್ಯಂ ಮಿಲ್ನೆ ಅವರು ಗಾಯದಿಂದ ಅಲಭ್ಯರಾಗಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲ್ಯೂಕಿ ಫರ್ಗ್ಯಸನ್, ಮ್ಯಾಟ್ ಹೆನ್ರಿ ಬೌಲಿಂಗ್ ವಿಭಾಗವನ್ನು ನೋಡಿಕೊಳ್ಳಬೇಕಿದೆ. ಇದರಲ್ಲಿ ಟಿಮ್ ಸೌಥಿ ಚೇತರಿಕೆಯ ಹಾದಿಯಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ ICC World Cup 2023: ಭಾರತಕ್ಕೆ ಹೊರಟ ಪಾಕ್ ತಂಡ; ಖಾಲಿ ಸ್ಟೇಡಿಯಂನಲ್ಲಿ ಪಂದ್ಯ
ನ್ಯೂಜಿಲ್ಯಾಂಡ್ ವಿಶ್ವಕಪ್ ತಂಡ
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ವಿ.ಕೀ, ಉ.ನಾ), ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.