ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಹಾಗೂ ಗೊಂದಲವನ್ನೂ ಮೂಡಿಸಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ (World Cup 2023) ಆಯೋಜನೆಯು ಕೊನೆಗೂ ಅಂತಿಮ ಹಂತಕ್ಕೆ ಬಂದಿದೆ. ಅಕ್ಟೋಬರ್ 15ರ ಬದಲು ಅಕ್ಟೋಬರ್ 14ರಂದು ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೊನೆಗೂ ಸಮ್ಮತಿ ಸೂಚಿಸಿದೆ ಎಂದು ವರದಿಯೊಂದು ತಿಳಿಸಿದೆ. ಹಾಗಾಗಿ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಕುರಿತ ಗೊಂದಲ ಕೊನೆಗೂ ಬಗೆಹರಿದಂತಾಗಿದೆ.
ಅಕ್ಟೋಬರ್ 15ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಉಭಯ ದೇಶಗಳು ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಪಾಕಿಸ್ತಾನ ತಂಡವು ಭಾರತಕ್ಕೆ ಬರಲು ಒಪ್ಪಿಗೆ ಸೂಚಿಸಿತ್ತು. ಆದರೆ, ಅಕ್ಟೋಬರ್ 15ರಂದು ನವರಾತ್ರಿ ಹಬ್ಬ ಹಾಗೂ ಭದ್ರತೆ ಕಾರಣಗಳಿಂದಾಗಿ ದಿನಾಂಕ ಬದಲಿಸಲು ಬಿಸಿಸಿಐ ತೀರ್ಮಾನಿಸಿತ್ತು. ಈಗ ಐಸಿಸಿ ಹಾಗೂ ಬಿಸಿಸಿಐ ಪ್ರಸ್ತಾಪವನ್ನು ಪಾಕಿಸ್ತಾನ ಒಪ್ಪಿದ ಕಾರಣ ಅಕ್ಟೋಬರ್ 14ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಬಾಬರ್ ಅಜಂ ನೇತೃತ್ವದ ತಂಡವು ಅಕ್ಟೋಬರ್ 12ರಂದು ಶ್ರೀಲಂಕಾ ವಿರುದ್ಧ ಹೈದರಾಬಾದ್‌ನಲ್ಲಿ ಆಡಬೇಕಿದ್ದ ಪಂದ್ಯವನ್ನು ಅಕ್ಟೋಬರ್ 10ರಂದೇ ಆಡುವುದರಿಂದ ಭಾರತದ ವಿರುದ್ಧ ನಡೆಯುವ ಪಂದ್ಯಕ್ಕೆ ಮೂರು ದಿನ ಕಾಲಾವಕಾಶ ಸಿಗಲಿದೆ. ಹಾಗಾಗಿ, ಪಾಕಿಸ್ತಾನವು ಅಕ್ಟೋಬರ್ 14ರ ಪಂದ್ಯಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 5ರಿಂದ ವಿಶ್ವಕಪ್ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 8ರಂದು ಭಾರತವು ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಇದನ್ನೂ ಓದಿ: ರಂಗೇರಿದ ಭಾರತ-ಪಾಕ್ ವಿಶ್ವಕಪ್ ಪಂದ್ಯ; 10 ಸೆಕೆಂಡ್ ಜಾಹೀರಾತಿಗೆ ಇಷ್ಟು ಲಕ್ಷ ಮೌಲ್ಯ!
201 ರ ಆವೃತ್ತಿಯಲ್ಲಿ ಸಹ ಆತಿಥ್ಯ ವಹಿಸಿದ ನಂತರ ಭಾರತವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆ ಆತಿಥ್ಯ ವಹಿಸಲಿದೆ. 2013 ರಲ್ಲಿ ಕೊನೆಯ ಪಂದ್ಯವನ್ನು ಆಡಿದ ನಂತರ ಭಾರತವು 10 ವರ್ಷಗಳ ನಂತರ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯವನ್ನು ಆಡಲಿದೆ. ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತವೆ, ಆದ್ದರಿಂದ ಅಭಿಮಾನಿಗಳು ಈ ಎರಡು ತಂಡಗಳ ಆಟವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ, ಉಭಯ ತಂಡಗಳ ನಡುವಿನ ವಿಶ್ವಕಪ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.