ಕರಾಚಿ: ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಪಂದ್ಯಾವಳಿ ಆಡಿಸಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪವನ್ನು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳು ತಿರಸ್ಕರಿಸಿರುವ ಹಿಂದೆ ಬಿಸಿಸಿಐ ಕೈವಾಡವಿದೆ ಎಂದಿರುವ ಪಾಕಿಸ್ತಾನ, ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಪಾಕ್ ತಂಡ ಆಡುವುದಿಲ್ಲ ಎಂದು ಹೇಳಿದೆ.
ಭಾರತದ ವಿರುದ್ಧ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಯಾವುದೇ ಕಾರಣಕ್ಕೂ ಪಾಕಿಸ್ತಾನ ತಂಡ ಆಡುವುದಿಲ್ಲ ಎಂದು ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಪ್ರಸ್ತಾಪ ಸಲ್ಲಿಸಿದ್ದಾರೆ. ಆದರೆ ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರು ಸೇರಿ ಬೇರೆ ಯಾವುದೇ ಸ್ಥಳದಲ್ಲಿ ಪಂದ್ಯಗಳು ನಡೆದರೂ ಅಲ್ಲಿ ಆಡಲಿದ್ದೇವೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಐಸಿಸಿ ಮುಖ್ಯಸ್ಥ ಗ್ರೇಗ್ ಬಾರ್ಕ್ಲೇ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ಗಿಯೋಫ್ ಅಲ್ಲಡೈಸ್ ಕರಾಚಿಗೆ ಭೇಟಿ ನೀಡಿ ವಿಶ್ವ ಕಪ್ ಮತ್ತು ಏಷ್ಯಾ ಕಪ್ ವಿಚಾರದಲ್ಲಿ ಪಾಕ್ ಕ್ರಿಕೆಟ್ ಮಂಡಳಿಯ ಜತೆ ಚರ್ಚೆ ನಡೆಸಿದ್ದರು. ಆದರೆ ಈ ಸಭೆಯಲ್ಲಿ ಪಾಕ್ ಮಾತ್ರ ಹೈಬ್ರಿಡ್ ಮಾದರಿಯಲ್ಲಿಯೇ ಪಂದ್ಯ ನಡೆಯಬೇಕು ಎಂದು ಪಟ್ಟು ಹಿಡಿದಿತ್ತು. ಇದೀಗ ನೆರೆಯ ದೇಶಗಳು ಬಿಸಿಸಿಐಗೆ ಬೆಂಬಲ ಸೂಚಿಸಿದ ಬೆನ್ನಲೇ ಪಾಕ್ ಮತ್ತೊಂದು ಕುತಂತ್ರಕ್ಕೆ ಮುಂದಾಗಿದೆ.
ಇದನ್ನೂ ಓದಿ ICC World Cup 2023: ಪಾಕಿಸ್ತಾನಕ್ಕೆ ಭೇಟಿ ನೀಡಿದ ಐಸಿಸಿ ಮುಖ್ಯಸ್ಥರು
ಏಷ್ಯಾ ಕಪ್ ರದ್ದಾಗುವ ಸಾಧ್ಯತೆ ಅಧಿಕ
ಏಷ್ಯಾ ಕೌನ್ಸಿಲ್ ಮತ್ತು ಐಸಿಸಿ ಎಷ್ಟೇ ಪ್ರಯತ್ನಪಟ್ಟರೂ ಪಾಕಿಸ್ತಾನ ಮಾತ್ರ ಏಷ್ಯಾ ಕಪ್ ಪಾಕ್ ನೆಲದಲ್ಲೇ ನಡೆಯಬೇಕು, ಒಂದೊಮ್ಮೆ ಇದು ಪಾಕ್ನಿಂದ ಹೊರಗಡೆ ನಡೆದರೆ ತಮ್ಮ ತಂಡ ಈ ಟೂರ್ನಿಯನ್ನು ಬಹಿಷ್ಕರಿಸಲಿದೆ ಎಂದು ಕಡ್ಡಿ ಮುರಿದಂತೆ ಹೇಳಿದೆ. ಇದೇ ತಿಂಗಳು ಏಷ್ಯಾ ಕ್ರಿಕೆಟ್ ಮಂಡಳಿ ಸಭೆ ನಡೆಯಲಿದ್ದು, ಇದರಲ್ಲಿ ಏಷ್ಯಾಕಪ್‌ನ ಅಂತಿಮ ಭವಿಷ್ಯ ನಿರ್ಧಾರವಾಗಲಿದೆ. ಆದರೆ ಮೂಲಗಳ ಪ್ರಕಾರ ಈ ಬಾರಿಯ ಏಷ್ಯಾಕಪ್ ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ವರದಿಯಾಗಿದೆ.