Site icon Vistara News

ICC World Cup 2023 : ಭಾರತ ತಂಡಕ್ಕೆ ಅಂಪೈರ್​ಗಳು ಬೇರೆಯೇ ಚೆಂಡು ಕೊಡುತ್ತಾರೆ; ಪಾಕ್ ಕ್ರಿಕೆಟಿಗನ ನಂಜಿನ ಮಾತು

raza

raza

ನವ ದೆಹಲಿ: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ (World Cup) ಟೀಮ್‌ ಇಂಡಿಯಾ (Team India) ಸೆಮಿ ಫೈನಲ್‌ಗೆ ಪ್ರವೇಶಿಸಿದೆ. ಅಂಕಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಈ ಮಧ್ಯೆ ‘ʼಐಸಿಸಿ, ಬಿಸಿಸಿಐ ಭಾರತೀಯ ಬೌಲರ್‌ಗಳಿಗೆ ವಿಶೇಷ ಚೆಂಡುಗಳನ್ನು ಒದಗಿಸುವುದರಿಂದ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ” ಎಂದು ಪಾಕಿಸ್ತಾನದ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಹಸನ್ ರಾಝಾ ಆರೋಪಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಪ್ರಸ್ತುತ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಕುರಿತು ಪಾಕಿಸ್ತಾನದ ಟಿವಿ ಚಾನಲ್‌ ವಿಶ್ಲೇಷಣೆ ನಡೆಸುತ್ತಿದೆ. ವಾಸಿಂ ಅಕ್ರಮ್, ಶೋಯೆಬ್ ಮಲಿಕ್ ಮತ್ತು ಮಿಸ್ಬಾ ಉಲ್ ಹಕ್ ಮತ್ತಿತರರು ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನವನ್ನು ಎತ್ತಿಹಿಡಿದು ವಸ್ತು ನಿಷ್ಠ ವಿಶ್ಲೇಷಣೆ ನಡೆಸುತ್ತಿದ್ದಾರೆ. ಇತ್ತ ‘ತಜ್ಞರ ಅಭಿಪ್ರಾಯ’ ಹೆಸರಿನಲ್ಲಿ ಟಿವಿ ನಿರೂಪಕರು ಮತ್ತು ಮಾಜಿ ಕ್ರಿಕೆಟಿಗರು ಹಾಸ್ಯಾಸ್ಪದ ಮತ್ತು ಆಧಾರರಹಿತ ಹೇಳಿಕೆಯನ್ನು ನೀಡುತ್ತಿದ್ದಾರೆ.

ನವೆಂಬರ್‌ 2ರಂದು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ ನಂತರ ನಿರೂಪಕರು ರಾಝಾ ಅವರ ಬಳಿ, ʼʼಭಾರತೀಯ ಬೌಲರ್‌ಗಳಿಗೆ ಕೆಲವು ವಿಶೇಷ ಚೆಂಡುಗಳನ್ನು ನೀಡಲಾಗಿದೆಯೇ? ಅದರಿಂದ ಅವರು ಯಶಸ್ಸು ಪಡೆದಿದ್ದಾರೆಯೇ?ʼʼ ಎಂದು ಪ್ರಶ್ನಿಸಿದರು. ಜತೆಗೆ ʼʼಭಾರತೀಯ ಬೌಲರ್‌ಗಳ ಸೀಮ್ ಮತ್ತು ಸ್ವಿಂಗ್ ಪ್ರಮಾಣವನ್ನು ಗಮನಿಸಿದರೆ ಈ ಅನುಮಾನ ಮೂಡುತ್ತಿದೆʼʼ ಎಂದು ಹೇಳಿದ್ದಾರೆ.

ಹಸನ್ ರಾಝಾ ಹೇಳಿದ್ದೇನು?

ಇದಕ್ಕೆ ಉತ್ತರಿಸಿದ ಹಸನ್ ರಾಝಾ, ʼʼಭಾರತ ಬೌಲಿಂಗ್ ಮಾಡಲು ಬಂದಾಗ ಚೆಂಡು ಬದಲಾಗುತ್ತದೆ. ಬಹುಶಃ ಐಸಿಸಿ ಅಥವಾ ಬಿಸಿಸಿಐ ಭಾರತಕ್ಕೆ ವಿಭಿನ್ನ ಚೆಂಡನ್ನು ನೀಡುತ್ತಿದೆ. ಮೂರನೇ ಅಂಪೈರ್ ಕೂಡ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ಪರವಾಗಿದ್ದಾರೆʼʼ ಎಂದು ಆರೋಪಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ʼʼವಾಸ್ತವವಾಗಿ, ಕೆಲವು ಡಿಆರ್‌ಎಸ್‌ ನಿರ್ಧಾರಗಳು ಭಾರತದ ಪರವಾಗಿ ಇವೆ. ಇವನ್ನು ತನಿಖೆ ನಡೆಸಬೇಕುʼʼ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.

ಯಾವುದೇ ತಾರ್ಕಿಕ ವಿವರಣೆ ಅಥವಾ ಉದಾಹರಣೆಯನ್ನು ನೀಡದೆ ರಾಝಾ ತಮ್ಮ ಊಹೆ ಮತ್ತು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ʼʼಪಾಕಿಸ್ತಾನವು ಮತ್ತು ಭಾರತ ಮ್ಯಾಚ್‌ನಲ್ಲಿ ಚೆಂಡುಗಳನ್ನು ಹೇಗೆ ಪರಿಶೀಲಿಸಲಾಗುತ್ತದೆಯೋ ಅದೇ ರೀತಿ ಎಲ್ಲ ಪಂದ್ಯಗಳಲ್ಲಿಯೂ ಪರಿಶೀಲನೆ ನಡೆಸಬೇಕುʼʼ ಎಂದಿದ್ದಾರೆ. ʼʼಐಸಿಸಿ, ಬಿಸಿಸಿಐ ಮತ್ತು ಚೆಂಡುಗಳನ್ನು ಒದಗಿಸುವ ಅಂಪೈರ್ ನಡುವೆ ಸಂಬಂಧವಿದೆ ಮತ್ತು ಭಾರತೀಯ ಬೌಲರ್‌ಗಳಿಗೆ ಕೆಲವು ವಿಶಿಷ್ಟ ಚೆಂಡುಗಳನ್ನು ನೀಡಲಾಗುತ್ತದೆʼʼ ಎಂದು ಆರೋಪಿಸಿದ್ದಾರೆ. ಈ ಹೇಳಿಕೆಗಳಿಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಕೊನೆಯ ಸ್ಥಾನಿ ಇಂಗ್ಲೆಂಡ್​ಗೂ ಇದೆ ಸೆಮಿಫೈನಲ್​ ಅವಕಾಶ; ಹೇಗಿದೆ ಈ ಲೆಕ್ಕಾಚಾರ?

1996ರಲ್ಲಿ ರಾಝಾ ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಅವರಿಗೆ 14 ವರ್ಷ 227 ದಿನ ಎಂದು ಹೇಳಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂದು ರಾಝಾ ಅವರನ್ನು ಪಾಕಿಸ್ತಾನ ಹೇಳಿಕೊಂಡಿತ್ತು. ಇದು ಸುಳ್ಳು ಎಂದು ನಂತರ ಬಹಿರಂಗವಾಯಿತು. ರಾಝಾ 1996-2005ರ ನಡುವೆ ಪಾಕಿಸ್ತಾನಕ್ಕಾಗಿ ಏಳು ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Exit mobile version