Site icon Vistara News

ನಾಳೆಯಿಂದ ವಿಶ್ವಕಪ್​ ಅಭ್ಯಾಸ ಪಂದ್ಯ; 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟ ಪಾಕಿಸ್ತಾನ ತಂಡ

pakistan team reached india

ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್(ICC World Cup 2023)​ ಟೂರ್ನಿಯ ಅಭ್ಯಾಸ ಪಂದ್ಯಗಳು(icc world cup 2023 warm up matches) ಶುಕ್ರವಾರದಿಂದ ಆರಂಭಗೊಳ್ಳಲಿದೆ. ಒಂದೇ ದಿನ ಮೂರು ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಬಾಂಗ್ಲಾದೇಶ vs ಶ್ರೀಲಂಕಾ, ದಕ್ಷಿಣ ಆಫ್ರಿಕಾ vs ಅಫಘಾನಿಸ್ತಾನ, ಪಾಕಿಸ್ತಾನ vs ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ತಂಡ(pakistan team) ಬುಧವಾರ ತಡರಾತ್ರಿ ಭಾರತಕ್ಕೆ ಆಗಮಿಸಿದ್ದು ಹೈದಾರಾಬಾದ್​ಗೆ ತಲುಪಿದೆ.

7 ವರ್ಷಗಳ ಬಳಿಕ ಭಾರಕ್ಕೆ ಬಂದ ಪಾಕ್​ ತಂಡ

ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ವೇಳೆ ಭಾರಿ ಬಿಗಿ ಭದ್ರತೆಯೂ ಮಾಡಲಾಗಿತ್ತು. ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿತು. 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್​ ತಂಡ ಭಾರತಕ್ಕೆ ಬಂದಿತ್ತು.

ಖಾಲಿ ಸ್ಟೇಡಿಯಂನಲ್ಲಿ ಪಂದ್ಯ

ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್​ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್​ ವಿರುದ್ಧ ಆಡಲಿದೆ. ಆದರೆ ಈ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ಈಗಾಗಲೇ ತಿಳಿಸಿದೆ. ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿದ್ದರು .ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ ICC World Cup 2023: ಸಂಪೂರ್ಣ ಫಿಟ್​ ಆಗಿಲ್ಲ ಎಂದು ತಂಡಕ್ಕೆ ಆತಂಕ ಸೃಷ್ಟಿಸಿದ ವಿಲಿಯಮ್ಸನ್

ಭಾರತ-ಪಾಕ್​ ಮುಖಾಮುಖಿ

ಈ ಮಹತ್ವದ ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಭಾರತ ಮತ್ತು ಪಾಕ್​ ನಡುವಣ ಹೈವೋಲ್ಟೇಜ್​ ಕದನ ಅಕ್ಟೋಬರ್​ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಪಾಕಿಸ್ತಾನ ವಿಶ್ವಕಪ್​ ತಂಡ

ಬಾಬರ್‌ ಅಜಂ (ನಾಯಕ), ಶದಾಬ್‌ ಖಾನ್‌ (ಉಪ ನಾಯಕ), ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಅಬ್ದುಲ್ಲಾ ಶಫೀಕ್‌, ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಅಹ್ಮದ್‌, ಅಘಾ ಸಲ್ಮಾನ್‌, ಸೌದ್‌ ಶಕೀಲ್‌, ಮೊಹಮ್ಮದ್‌ ನವಾಜ್‌, ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಹಸನ್‌ ಅಲಿ, ಉಸಾಮ ಮಿರ್‌, ಮೊಹಮ್ಮದ್‌ ವಸೀಂ. ಮೀಸಲು ಆಟಗಾರು: ಅಬ್ರಾರ್‌ ಅಹ್ಮದ್‌, ಜಮಾನ್‌ ಖಾನ್‌ ಹಾಗೂ ಮೊಹಮ್ಮದ್‌ ಹ್ಯಾರಿಸ್‌.

Exit mobile version