ಹರಾರೆ: ಈಗಾಗಲೇ ಏಕದಿನ ವಿಶ್ವ ಕಪ್ಗೆ (World Cup Qualifier)ಅರ್ಹತೆ ಪಡೆಯದೆ ಹೊರಬಿದ್ದಿರುವ ವೆಸ್ಟ್ ಇಂಡೀಸ್ ತಂಡ ಅಂತಿಮ ಸೂಪರ್ ಸಿಕ್ಸ್(Super Sixes) ಪಂದ್ಯದಲ್ಲಿ ಒಮಾನ್(Oman vs West Indies) ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಅಭಿಯಾನವನ್ನು ಕೊನೆಗೊಳಿಸಿದೆ. ಇದಕ್ಕೂ ಮುನ್ನ ಆಡಿದ ಮೂರೂ ಪಂದ್ಯಗಳಲ್ಲಿ ವಿಂಡೀಸ್ ಸೋಲು ಕಂಡಿತ್ತು.
ಬುಧವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ ಶೋಯಿಬ್ ಖಾನ್ ಮತ್ತು ಸೂರಜ್ ಕುಮಾರ್ ಅವರ ಅರ್ಧಶತಕದ ನೆರವಿನಿಂದ 9 ವಿಕೆಟಿಗೆ 221 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಅವರ ಶತಕ ಮತ್ತು ಶೈ ಹೋಪ್ ಅವರ ಅಜೇಯ ಅರ್ಧಶತಕದಿಂದಾಗಿ 39.4 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿ ಗೆಲುವು ಸಾಧಿಸಿತು.
ಬ್ರೆಂಡನ್ ಕಿಂಗ್ 104 ಎಸೆತಗಳಿಂದ 100 ರನ್ ಹೊಡೆದರೆ ಹೋಪ್ 65 ಎಸೆತಗಳಿಂದ 63 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲಿಂಗ್ನಲ್ಲಿ ರೊಮಾರಿಯೊ ಶೆಫರ್ಡ್ 44 ರನ್ನಿಗೆ 3 ವಿಕೆಟ್ ಪಡೆದರು. ಗುರುವಾರ ನಡೆಯುವ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಸ್ಕಾಟ್ಲೆಂಡ್ ಸದ್ಯ 6 ಅಂಕ ಸಂಪಾದಿಸಿದೆ. ನೆದರ್ಲೆಂಡ್ಸ್ 4 ಅಂಕ ಹೊಂದಿದೆ. ಆದರೆ ನೆದರ್ಲೆಂಡ್ಸ್ ಮೈನಸ್ 0.042 ರನ್‌ರೇಟ್ ಹೊಂದಿದ್ದರೆ ಸ್ಕಾಟ್ಲೆಂಡ್ ಪ್ಲಸ್ 0.296 ರನ್ ರೇಟ್ ಹೊಂದಿದೆ. ಹೀಗಾಗಿ ಸ್ಕಾಟ್ಲೆಂಡ್‌ಗೆ ಫೈನಲಿಗೇರುವ ಅವಕಾಶ ಹೆಚ್ಚಿದೆ.
ಹರಾರೆಯ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಶನಿವಾರದ ವಿಶ್ವಕಪ್ ಅರ್ಹತಾ ಪಂದ್ಯದ ಸೂಪರ್ ಸಿಕ್ಸ್ ಕಾದಾಟದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 7 ವಿಕೆಟ್ಗಳ ಹೀನಾಯ ಸೋಲು ಕಾಣುವ ಮೂಲಕ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ಮೂಲಕ 1975 ಮತ್ತು 1979 ರ ಚಾಂಪಿಯನ್ ವಿಂಡೀಸ್ 48 ವರ್ಷಗಳ ಏಕದಿನ ವಿಶ್ವ ಕಪ್ ಇತಿಹಾಸದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಗ್ರ 10 ತಂಡಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳದ ಅವಮಾನಕ್ಕೆ ಸಿಲುಕಿತ್ತು.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ : ವಿಶ್ವಕಪ್ಗೆ ವೆಸ್ಟ್ ಇಂಡೀಸ್ ತಂಡ ಅರ್ಹತೆಯನ್ನೇ ಪಡೆಯದಿರುವುದು ಕ್ರಿಕೆಟ್ ದುರಂತ
A good win today. Well played to Oman. 🫱🏾🫲🏽#MenInMaroon pic.twitter.com/jjuSJf0Pua
— Windies Cricket (@windiescricket) July 5, 2023
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದ್ದ ವಿಂಡೀಸ್ ಕೇವಲ 181 ರನ್ಗಳಿಗೆ ಸರ್ವಪತನ ಕಂಡಿತ್ತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ಮೂರು ವಿಕೆಟ್ ಕಳೆದುಕೊಂಡು 185ರನ್ ಪೇರಿಸಿ ಗೆಲುವಿನ ನಗೆ ಬೀರಿತ್ತು. ಸ್ಕಾಟ್ಲೆಂಡ್ ಪರ ಮ್ಯಾಥ್ಯೂ ಕ್ರಾಸ್ ಔಟಾಗದೆ 74 ರನ್, ಬ್ರ್ಯಾಂಡನ್ ಮೆಕ್‌ಮುಲ್ಲೆನ್ 69 ರನ್ ಬಾರಿಸಿ ತಂಡೆದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತನೇ ಆಳಿದ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ತಂಡದ ದುಸ್ಥಿತಿ ಕಂಡು ಅನೇಕ ಮಾಜಿ ವಿಂಡೀಸ್ ಆಟಗಾರರು ಬೇಸರ ವ್ಯಕ್ತಪಡಿಸಿದ್ದರು.