Site icon Vistara News

World Cup Qualifier: 48 ವರ್ಷಗಳ ಏಕದಿನ ವಿಶ್ವ ಕಪ್​ ಇತಿಹಾಸದಲ್ಲೇ ವಿಂಡೀಸ್​ಗೆ ಮೊದಲ ಬಾರಿ ನಿರಾಸೆ

ICC Cricket World Cup Qualifiers 2023

ಹರಾರೆ: ಒಂದು ಕಾಲದಲ್ಲಿ ಕ್ರಿಕೆಟ್​ ಜಗತ್ತನೇ ಆಳಿದ ಎರಡು ಬಾರಿಯ ವಿಶ್ವ ಚಾಂಪಿಯನ್​ ವೆಸ್ಟ್​ ಇಂಡೀಸ್​ ತಂಡದ ಸ್ಥಿತಿ ಇಂದು ದುಸ್ಥಿತಿಗೆ ಬಂದು ನಿಂತಿದೆ. ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸೋತು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ(World Cup Qualifier) ಪಡೆಯುವ ರೇಸ್‌ನಿಂದ ಹೊರ ಬಿದ್ದ ಸಂಕಟಕ್ಕೆ ಸಿಲುಕಿದೆ. ಕಳೆದ ವರ್ಷ ನಡೆದ ಟಿ20 ವಿಶ್ವ ಕಪ್​ಗೂ ವಿಂಡೀಸ್​ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

ಹರಾರೆಯ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಶನಿವಾರದ ವಿಶ್ವಕಪ್ ಅರ್ಹತಾ ಪಂದ್ಯದ ಸೂಪರ್ ಸಿಕ್ಸ್ ಕಾದಾಟದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 7 ವಿಕೆಟ್​ಗಳ ಹೀನಾಯ ಸೋಲು ಕಂಡಿತು. ಪಂದ್ಯ ಗೆದ್ದರೂ ಸ್ಕಾಟ್ಲೆಂಡ್​ಗೆ ಯಾವುದೇ ಲಾಭವಾಗಲಿಲ್ಲ. ಅದೂ ಕೂಡ ಅರ್ಹತೆ ಪಡೆಯಲಿಲ್ಲ.

ಈ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಸ್ಕಾಟ್ಲೆಂಡ್ ಆರಂಭದಲ್ಲೇ ವಿಂಡೀಸ್​ ಆಟಗಾರರ ವಿಕೆಟ್​ ಕೀಳುವಲ್ಲಿ ಯಶಸ್ವಿಯಾದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ರನ್​ ಗಳಿಸಲು ಪರದಾಡಿದ ವಿಂಡೀಸ್​ ಕೇವಲ 181 ರನ್​ಗಳಿಗೆ ಸರ್ವಪತನ ಕಂಡಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ಮೂರು ವಿಕೆಟ್​ ಕಳೆದುಕೊಂಡು 185ರನ್​ ಪೇರಿಸಿ ಗೆಲುವಿನ ನಗೆ ಬೀರಿತು. ಸ್ಕಾಟ್ಲೆಂಡ್ ಪರ ಮ್ಯಾಥ್ಯೂ ಕ್ರಾಸ್ ಔಟಾಗದೆ 74 ರನ್, ಬ್ರ್ಯಾಂಡನ್ ಮೆಕ್‌ಮುಲ್ಲೆನ್ 69 ರನ್ ಬಾರಿಸಿ ತಂಡೆದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್ ನಲ್ಲೂ ಮಿಂಚಿದ ಮೆಕ್‌ಮುಲ್ಲೆನ್ 3 ವಿಕೆಟ್ ಪಡೆದರು.

ವಿಂಡೀಸ್​ ಪರ ಬ್ರಾಂಡನ್ ಕಿಂಗ್ (22), ಪೂರನ್ (21), ಹೋಲ್ಡರ್ (45) ಮತ್ತು ರೊಮಾರಿಯೋ ಶೆಫರ್ಡ್(36) ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಉಳಿದ ಆಟಗಾರರು ರನ್ ಬರ ಅನುಭವಿಸಿ ಪೆವಿಲಿಯನ್ ಪೆರೇಡ್ ನಡೆಸಿದರು. ಪಂದ್ಯ ಗೆಲ್ಲಲ್ಲೇ ಬೇಕೆಂಬ ಆಸಕ್ತಿ ವಿಂಡೀಸ್​ ಆಟಗಾರರಲ್ಲಿ ಕಂಡುಬರಲಿಲ್ಲ. ಕೇವಲ ಲೆಕ್ಕ ಭರ್ತಿಗೆ ಆಡಿದಂತಿತ್ತು.

ಇದನ್ನೂ ಓದಿ World Cup 2023 : ಇದು ಆಘಾತಕಾರಿ ಸುದ್ದಿ; ಭಾರತದಲ್ಲಿ ನಡೆಯುವ ವಿಶ್ವ ಕಪ್​ಗೆ ವೆಸ್ಟ್​ ಇಂಡೀಸ್ ತಂಡ ಇಲ್ಲ!

1975 ಮತ್ತು 1979 ರ ಚಾಂಪಿಯನ್‌ ವಿಂಡೀಸ್ 48 ವರ್ಷಗಳ ಏಕದಿನ ವಿಶ್ವ ಕಪ್​ ಇತಿಹಾಸದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಗ್ರ 10 ತಂಡಗಳಲ್ಲಿ ಕಾಣಿಸಿಕೊಳ್ಳದಿರುವುದು ಇದೇ ಮೊದಲು. ದಿಗ್ಗಜ ಕ್ರಿಕೆಟ್​ ಆಟಗಾರರನ್ನು ಹೊಂದಿದ್ದ ವಿಂಡೀಸ್​ಗೆ ಇಂದು ಈ ಸ್ಥಿತಿ ಎದುರಾಗಿದ್ದು ನಿಜಕ್ಕೂ ಬೇಸರದ ಸಂಗತಿ.

Exit mobile version