ನವ ದೆಹಲಿ: 2023ರ ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸುವ ಕೊನೇ ದಿನಾಂಕ ನಿಗದಿಯಾಗಿದೆ. ಭಾಗವಹಿಸುವ ಎಲ್ಲ ತಂಡಗಳು ಈ ಅವಧಿಯೊಳಗೆ ತಂಡದ ಆಟಗಾರರ ಪಟ್ಟಿಯನ್ನು ಐಸಿಸಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಆಗಸ್ಟ್ 29 ತಂಡಗಳನ್ನು ಸಲ್ಲಿಸಲು ಪ್ರಾಥಮಿಕ ದಿನಾಂಕವಾಗಿದ್ದರೆ, ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿರುತ್ತದೆ. ಆ ಬಳಿಕ ಬದಲು ಮಾಡುವ ಆಟಗಾರರಿಗೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆ ಬೇಕು. ಭಾರತ ತಂಡದ ಪಾಲಿಗೆ ಸವಾಲಿನ ವಿಷಯವೆಂದರೆ ವಿಕೆಟ್ಕೀಪರ್ ಬ್ಯಾಟರ್ ಆಯ್ಕೆ ಮಾಡುವುದು. ಸೆಪ್ಟೆಂಬರ್ 5 ರೊಳಗೆ ರಿಷಭ್ ಪಂತ್ ಅವರನ್ನು ಸಜ್ಜುಗೊಳಿಸುವುದು ಬಹುತೇಕ ಅಸಾಧ್ಯ. ಹೀಗಾಗಿ ಬಿಸಿಸಿಐ ಮತ್ತು ಆಯ್ಕೆಗಾರರು ಕೆಎಲ್ ರಾಹುಲ್ಗೆ ಜವಾಬ್ದಾರಿ ವಹಿಸಲೇಬೇಕು. ರಾಹುಲ್ ಚೇತರಿಸಿಕೊಂಡಿರುವ ಕಾರಣ ವಿಶ್ವ ಕಪ್ನಲ್ಲಿ ಕಣಕ್ಕೆ ಇಳಿಯವುದು ಖಚಿತ.
ರಿಷಭ್ ಪಂತ್ ಅವರನ್ನು ವಿಶ್ವಕಪ್ ವೇಳೆಗೆ ಸಜ್ಜುಗೊಳಿಸುವುದು ಸಾಧ್ಯವಿಲ್ಲ. ಅವರಿಗೆ ಹೆಚ್ಚಿನ ಸಮಯ ಬೇಕು. ಮುಖ್ಯವಾಗಿ, ಕೀಪಿಂಗ್ ಜವಾಬ್ದಾರಿಗೆ ಅವರು ಮರಳಲು ಹೆಚ್ಚಿನ ಸಮಯ ಬೇಕಾಗಬಹುದು. ಏಕದಿನ ಪಂದ್ಯಗಳಿಗೆ ರಾಹುಲ್ ನಮ್ಮ ನಿಯೋಜಿತ ಕೀಪರ್ ಆಗಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: KL Rahul : ರೂಮರ್ ಹಬ್ಬಿಸುವವರಿಗೆ ಬ್ಯಾಟ್ ಹಿಡಿದು ಬಿಸಿ ಮುಟ್ಟಿಸಿದ ಕೆ. ಎಲ್ ರಾಹುಲ್!
ವಿಶ್ವಕಪ್ಗೆ ಆರಂಭಿಕ ಹಂತದ ತಂಡವನ್ನು 30 ದಿನಗಳ ಮೊದಲು ಸಲ್ಲಿಕೆ ಮಾಡಬೇಕು. ಬಳಿಕ ಬೆಂಬಲ ಅವಧಿ ಆರಂಭವಾಗುತ್ತದೆ. ಪಂದ್ಯಾವಳಿಗಳಿಗೆ ಒಂದು ವಾರದ ಮೊದಲು ಬೆಂಬಲ ಅವಧಿಗಳು ಪ್ರಾರಂಭವಾಗುತ್ತವೆ. ನುಮತಿ ಪಡೆಯದೆ ಬೆಂಬಲ ಅವಧಿಗೆ ಮುಂಚಿತವಾಗಿ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಆದರೆ ಬೆಂಬಲ ಅವಧಿ ಪ್ರಾರಂಭವಾದ ನಂತರ ಈವೆಂಟ್ನ ಟೆಕ್ನಿಕಲ್ ಕಮಿಟಿ ಬದಲಾವಣೆಗಳನ್ನು ಅನುಮೋದಿಸಬೇಕಾಗಿದೆ.
ರಾಹುಲ್ ಫಿಟ್ನೆಸ್ ಕಳವಳಕಾರಿ
ಟೆಸ್ಟ್ ಕ್ರಿಕೆಟ್ನಲ್ಲೂ ರಾಹುಲ್ ಪೂರ್ಣಾವಧಿಯ ಕೀಪರ್ ಆಗಬೇಕು ಎಂಬದಾಗಿ ಆರಂಭದಲ್ಲಿ ಚರ್ಚೆಗಳು ನಡೆದಿದ್ದವು. ಆದರೆ ಅವರ ಫಿಟ್ನೆಸ್ ಆತಂಕಕಾರಿ. ಹೀಗಾಗಿ ಆಯ್ಕೆದಾರರು ಆ ಮಾರ್ಗವನ್ನು ಅನುಸರಿಸಲಿಲ್ಲ. ಏಷ್ಯಾ ಕಪ್ ವೇಳೆಗೆ ಸಂಪೂರ್ಣ ಫಿಟ್ ಆಗುವಂತೆ ಅವರಿಗೆ ಹೇಳಲಾಗಿದೆ. ಪ್ರಸ್ತುತ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನಶ್ಚೇತನದಲ್ಲಿರುವ ರಾಹುಲ್ ಬ್ಯಾಟಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ. ಅವರು ಈಗ ಮುಂದಿನ ಕೆಲವು ವಾರಗಳಲ್ಲಿ ತರಬೇತಿಯ ತೀವ್ರತೆ ಹೆಚ್ಚಿಸಲಿದ್ದಾರೆ.
ಐಪಿಎಲ್ 2023ರಲ್ಲಿ ಕೆ.ಎಲ್ ರಾಹುಲ್ ತೊಡೆಯ ನೋವಿಗೆ ಒಳಗಾಗಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಐಪಿಎಲ್ನ ಕೊನೇ ಹಂತ ಹಾಗೂ ಡಬ್ಲ್ಯುಟಿಸಿ ಫೈನಲ್ 2023 ಹಾಗೂ ವೆಸ್ಟ್ ಇಂಡೀಸ್ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ.
ಯಾರಿಗೆಲ್ಲ ಗಾಯ?
ಜಸ್ಪ್ರೀತ್ ಬುಮ್ರಾ: ಒಂದು ವರ್ಷದ ಕ್ರಿಕೆಟ್ ಆಟದಿಂದ ಹೊರಗುಳಿದಿರುವ ಬುಮ್ರಾ ಐರ್ಲೆಂಡ್ ಪ್ರವಾಸಕ್ಕೆ ಫಿಟ್ ಆಗುವ ಹಾದಿಯಲ್ಲಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಬೆನ್ನುನೋವಿನಿಂದ ಬಳಲಿದ್ದ ಅವರು ಅಲ್ಲಿಂದ ಭಾರತ ತಂಡದ ಸೇವೆಯಿಂದ ಹೊರಗಿದ್ದರು. ಬುಮ್ರಾ ಈಗ ಎನ್ಸಿಎಯಲ್ಲಿ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ.
ಕೆಎಲ್ ರಾಹುಲ್: ಶಸ್ತ್ರಚಿಕಿತ್ಸೆಯ ನಂತರ ಅವರು ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ. ಅವರು ಈ ವಾರವಷ್ಟೇ ಬ್ಯಾಟಿಂಗ್ ಅಭ್ಯಾಸ ಪ್ರಾರಂಭಿಸಿದ್ದಾರೆ. ಫಿಟ್ನೆಸ್ನಿಂದ ಇನ್ನೂ ದೂರವಿದ್ದಾರೆ. ಅವರು ತರಬೇತಿಯ ತೀವ್ರತೆಯನ್ನು ಹೆಚ್ಚಿಸಿ ಏಷ್ಯಾ ಕಪ್ಗೆ ಮರಳುವ ಸಾಧ್ಯತೆಯಿದೆ.
ಶ್ರೇಯಸ್ ಅಯ್ಯರ್: ಆರಂಭಿಕ ಏರಿಳಿತಗಳ ಹೊರತಾಗಿಯೂ, ಅಯ್ಯರ್ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಅವರು ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿ ಇದೀಗ ಬ್ಯಾಟಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಅವರು ಐರ್ಲೆಂಡ್ ಪ್ರವಾಸಕ್ಕೆ ಲಭ್ಯವಿರುವುದಿಲ್ಲ.
ರಿಷಭ್ ಪಂತ್: ಡಿಸೆಂಬರ್ನಲ್ಲಿ ಸಂಭವಿಸಿದ ಕಾರು ಅಪಘಾತದ ನಂತರ ಗಮನಾರ್ಹ ಪ್ರಗತಿ ಸಾಧಿಸಿದ್ದರೂ, ಯುವ ವಿಕೆಟ್ಕೀಪರ್ ಬ್ಯಾಟರ್ ಫಿಟ್ನೆಸ್ ಮರಳಿ ಪಡೆಯಲು ಸಾಕಷ್ಟು ದಿನಗಳು ಕಾಯಬೇಕಾಗುತ್ತದೆ. ಇನ್ನೂ 6-7 ತಿಂಗಳು ತೆಗೆದುಕೊಳ್ಳುವ ನಿರೀಕ್ಷೆಯಿದೆ.