ನವ ದೆಹಲಿ: ೧೦೦ ಮೀಟರ್ ಓಟವನ್ನು ೨೪. ೭೪ ಓಡಿ ಮುಗಿಸಿದ ಈ ಅಥ್ಲೀಟ್‌ಗೆ ಬಂಗಾರದ ಪದಕ ಒಲಿದಿದೆ. ಅಂದಹಾಗೆ ಅಂತಾರಾಷ್ಟ್ರಿಯ ಮಟ್ಟದ ಈ ಓಟದಲ್ಲಿ ಚಿನ್ನ ಗೆದ್ದವರು ೯೪ ವರ್ಷದ ಅಜ್ಜಿ!
ಅವರೇ ಭಾರತದ ಸ್ಪರ್ಧಿ ಭಾಗ್ವಾನಿ ದೇವಿ. ಫಿನ್‌ಲೆಂಡ್‌ನ ತೆಂಪೆರೆಯಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದ ಅವರು ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವೇದಿಕೆಯಲ್ಲಿ ಹಾರಿಸಿ ಮಿಂಚಿದ್ದಾರೆ. ಅವರ ಸಾಧನೆ ಇಲ್ಲಿಗೆ ಮುಗಿದಿಲ್ಲ. ಶಾಟ್‌ಪುಟ್ ಸ್ಪರ್ಧೆಯಲ್ಲೂ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭಾಗ್ವಾನಿ ದೇವಿ ಅವರ ಸಾಧನೆಯನ್ನು ಶ್ಲಾಘಿಸಿ ಭಾರತ ಸರ್ಕಾರದ ಕ್ರೀಡಾ ಇಲಾಖೆಯು ಟ್ವೀಟ್ ಮಾಡಿದೆ. “೯೪ ವರ್ಷದ ಭಾಗ್ವಾನ್‌ದೇವಿ ಅವರು ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ೧೦೦ ಮೀಟರ್ ಒಟದಲ್ಲಿ ಚಿನ್ನ ಗೆದ್ದಿರುವ ಅವರು ಶಾಟ್‌ಪುಟ್‌ನಲ್ಲಿ ಕಂಚು ಗಳಿಸಿದ್ದಾರೆ. ಅವರ ಪರಿಶ್ರಮಕ್ಕೆ ಮೆಚ್ಚಲೇಬೇಕುʼʼ ಎಂದು ಬರೆದುಕೊಂಡಿದೆ.
ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಜೂನ್ ೨೯ರಿಂದ ಜುಲೈ ೧೦ವರೆಗೆ ಫಿನ್‌ಲೆಂಡ್‌ನ ತೆಂಪೆರೆಯಲ್ಲಿ ನಡೆದಿದೆ. ೩೫ ವರ್ಷಕ್ಕಿಂತ ಹೆಚ್ಚಿನವರು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲೂ ನಾಲ್ಕು ಪ್ರತ್ಯೇಕ ಗುಂಪುಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಇದರಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಎರಡೂ ಸೇರಿಕೊಂಡಿದೆ.
ಇದನ್ನೂ ಓದಿ: INDvsENG T20 : ಸೂರ್ಯನ ಆಕಾಶಕ್ಕೆ ಮಿತಿಯೇ ಇರಲಿಲ್ಲ