ದುಬೈ: ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಕ್ತಾಯ ಕಂಡ ಬೆನ್ನಲೇ ಇದೀಗ 2023-2025(2023–2025 ICC World Test Championship)ರ ಆವೃತ್ತಿಯ ವೇಳಾಪಟ್ಟಿನಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಈ ವೇಳಾಪಟ್ಟಿ ಪ್ರಕಾರ ಟೀಮ್ ಇಂಡಿಯಾ ಒಟ್ಟು 19 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿಂಡೀಸ್ ವಿರುದ್ಧದ ಸರಣಿಯೇ ಭಾರತಕ್ಕೆ ಮೊದಲ ಪಂದ್ಯವಾಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) 2023-25ರ ಅಭಿಯಾನ ಶುಕ್ರವಾರದಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಆ್ಯಶಸ್ ಸರಣಿ ಮೊದಲ ಪಂದ್ಯವಾಗಲಿದೆ. ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಇದೀಗ ಮತ್ತೆ ಮೂರನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನ ಲೀಗ್ ಪಂದ್ಯಗಳನ್ನು ಆಡಲು ಸಜ್ಜಾಗಿದೆ.
ಭಾರತ ಒಟ್ಟು 19 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು, ಬಾಂಗ್ಲಾದೇಶ ವಿರುದ್ಧ ಎರಡು ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿದೇಶ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು, ದಕ್ಷಿಣ ಆಫ್ರಿಕ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಸತತ ಎರಡು ಬಾರಿ ಫೈನಲ್ ಪ್ರವೇಶ ಪಡೆದರೂ ಭಾರತ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ ಮೂರನೇ ಬಾರಿ ತಂಡ ಹೇಗೆ ಪ್ರದರ್ಶನ ತೋರಲಿದೆ. ಎಂದು ಕಾದು ನೋಡಬೇಕಿದೆ. ಜತೆಗೆ ತಂಡದಲ್ಲಿ ಯಾವೆಲ್ಲ ಬದಲಾವಣೆಗಳು ನಡೆಯಬಹುದು ಎನ್ನುವುದು ಕೂಡ ಪ್ರಮುಖವಾಗಿದೆ. ಈಗಾಗಲೇ 34 ಪ್ಲಸ್ ವಯಸ್ಸಾಗಿರುವ ವಿರಾಟ್ ಕೊಹ್ಲಿ, ಉಮೇಶ್ ಯಾದವ್, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಅವರು ಮುಂಬರುವ ಟೆಸ್ಟ್ ಫೈನಲ್ ಆಡುವುದು ಅನುಮಾನ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆ ಅಧಿಕ ಎನ್ನಲಾಗಿದೆ.
ಇದನ್ನೂ ಓದಿ WTC Final 2023 : ಐಪಿಎಲ್ ದುಡ್ಡಿಗಿಂತ ದೇಶವೇ ದೊಡ್ಡದು; ಚರ್ಚೆ ಹುಟ್ಟು ಹಾಕಿದ ಆಸೀಸ್ ವೇಗಿಯ ಹೇಳಿಕೆ!
ಹಿಂದಿನ ಆವೃತ್ತಿಯಲ್ಲಿ ಬಳಸಲಾದ ಅಂಕಗಳ ಶೇಕಡಾವಾರು ಮಾದರಿಯ ಆಧಾರದ ಮೇಲೆ ಅಂಕಗಳನ್ನು ನಿರ್ಧರಿಸಲಾಗುತ್ತದೆ. ತಂಡಗಳು ಗೆಲುವಿಗೆ 12 ಅಂಕಗಳನ್ನು, ಟೈಗೆ 6 ಮತ್ತು ಡ್ರಾಕ್ಕೆ 4 ಅಂಕಗಳನ್ನು ನೀಡಲಾಗುತ್ತದೆ. ಯಾವುದೇ ಹೊಸ ಬದಲಾವಣೆಗಳನ್ನು ಮಾಡಲಾಗಲಿಲ್ಲ.
ಭಾರತ ಟೆಸ್ಟ್ ಪಂದ್ಯಗಳ ವೇಳಾಪಟ್ಟಿ
ಭಾರತ vs ವೆಸ್ಟ್ ಇಂಡೀಸ್: ಜುಲೈ 12-16 ಮೊದಲ ಟೆಸ್ಟ್ (ಡೊಮಿನಿಕಾ), ಜುಲೈ 20-24 ಎರಡನೇ ಟೆಸ್ಟ್ (ಟ್ರಿನಿಡಾಡ್)
ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ: ಡಿಸೆಂಬರ್- ಮೊದಲ ಟೆಸ್ಟ್, ಜನವರಿ 2024-ಎರಡನೇ ಟೆಸ್ಟ್
ಇಂಗ್ಲೆಂಡ್ ಪ್ರವಾಸ: ಜನವರಿ/ಫೆಬ್ರವರಿ 2024-ಐದು ಟೆಸ್ಟ್‌ಗಳು
ಭಾರತ-ಬಾಂಗ್ಲಾದೇಶ: ಸೆಪ್ಟೆಂಬರ್/ಅಕ್ಟೋಬರ್ 2024-ಎರಡು ಟೆಸ್ಟ್‌ಗಳು
ಭಾರತ-ನ್ಯೂಜಿಲ್ಯಾಂಡ್: ಅಕ್ಟೋಬರ್/ನವೆಂಬರ್ 2024-ಮೂರು ಟೆಸ್ಟ್‌ಗಳು
ಆಸ್ಟ್ರೇಲಿಯಾ ಪ್ರವಾಸ: (ಬಾರ್ಡರ್-ಗವಾಸ್ಕರ್ ಟ್ರೋಫಿ), ನವೆಂಬರ್ 2024-ಜನವರಿ 2025 – ಐದು ಟೆಸ್ಟ್