ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ದಕ್ಷಿಣ ಆಫ್ರಿಕಾ, ‘ಕ್ಲೀನ್‌ಸ್ವೀಪ್’ ಅವಮಾನದಿಂದ ಪಾರಾಯಿತು. ಈ ಫಲಿತಾಂಶದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್(World Test Championship) ತಲುಪಲು ಆಸ್ಟ್ರೇಲಿಯಾ ತಂಡವು ಇನ್ನಷ್ಟು ಕಾಯಬೇಕಾಗಿದೆ. ಆದರೆ ಭಾರತ ಮತ್ತು ಲಂಕಾ ತಂಡಕ್ಕೆ ಫೈನಲ್ಗೇರಲು ಇನ್ನಷ್ಟು ಅವಕಾಶ ಲಭಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸ್ಥಾನ ಭದ್ರಪಡಿಸುವ ಯೋಜನೆಯಲ್ಲಿತ್ತು. ಆದರೆ ಈ ಪಂದ್ಯ ಡ್ರಾದಲ್ಲಿ ಅಂತ್ಯಕಂಡ ಕಾರಣ ಇದೀಗ ಆಸ್ಟ್ರೇಲಿಯಾ ಶೇಕಡಾವಾರು ಅಂಕದಲ್ಲಿ ಕುಸಿತ ಕಂಡಿದೆ.
ಸದ್ಯ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೂ ಶೇಕಾಡಾವಾರು ಅಂಕದಲ್ಲಿ 75.56 ಕ್ಕೆ ಇಳಿದಿದೆ. ಭಾರತ 58.93 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 53.33 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲು ಕಂಡರೆ. ಮತ್ತಷ್ಟು ಅಂಕ ಕುಸಿತ ಕಂಡು ಆಸೀಸ್ ಅಗ್ರಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಆಗ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾಗೆ ಅವಕಾಶವೊಂದು ದೊರೆಯಲಿದೆ. ಆದರೆ ಲಂಕಾ ಕೂಡ ತಮ್ಮ ಮುಂದಿನ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿಬೇಕಿದೆ. ಒಟ್ಟಾರೆ ಸಿಡ್ನಿ ಟೆಸ್ಟ್ ಪಂದ್ಯ ಡ್ರಾಗೊಂಡ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರೇಸ್ನಲ್ಲಿ ಮತ್ತಷ್ಟು ಪೈಪೋಟಿ ಏರ್ಪಟ್ಟಿದೆ.
ಇದನ್ನೂ ಓದಿ | ICC Test Ranking | ಟೆಸ್ಟ್ ರ‍್ಯಾಂಕಿಂಗ್; ಪ್ರಗತಿ ಕಂಡ ಅಯ್ಯರ್, ಅಶ್ವಿನ್; ಕುಸಿತ ಕಂಡ ವಿರಾಟ್