ದುಬೈ: ಐಸಿಸಿ ಸೋಮವಾರ ಬಿಡುಗಡೆ ಮಾಡಿರುವ WTC Point Tableನಲ್ಲಿ ಭಾರತ ತಂಡ ೩ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಂದೊಂದು ಸ್ಥಾನಗಳ ಮುಂಬಡ್ತಿ ಪಡೆದುಕೊಂಡಿವೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡ ಹಾಗೂ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಗಳು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಐಸಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್ ಬಳಗ ಕ್ಲೀನ್ ಸ್ವೀಪ್ ಮಾಡಿದ್ದರೆ, ಬಾಂಗ್ಲಾದೇಶ ಬಳಗವನ್ನು ವೆಸ್ಟ್ ಇಂಡೀಸ್ ೨-೦ ಅಂತರದಲ್ಲಿ ವೆಸ್ಟ್ ಇಂಡೀಸ್ ಸರಣಿ ಗೆಲುವು ಕಂಡಿತ್ತು. ಹೀಗಾಗಿ ಇಂಗ್ಲೆಂಡ್ ತಂಡ ಶೇಕಡಾವಾರು ೨೮.೮೯ ಅಂಕಗಳೊಂದಿಗೆ ಏಳನೇ ಸ್ಥಾನಕ್ಕೇರಿದೆ. ಏತನ್ಮಧ್ಯೆ, ಕಳೆದ ಬಾರಿಯ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಗೆದ್ದಿದ್ದ ನ್ಯೂಜಿಲೆಂಡ್ ತಂಡ ಎಂಟನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಆ ತಂಡದ ಫೈನಲ್ ತಲುಪುವ ಅವಕಾಶ ಕಡಿಮೆಯಾಗಿದೆ.
ಇನ್ನು ಶೇಕಡಾ ೫೦ರಷ್ಟು ಅಂಕ ಪಡೆದುಕೊಂಡಿರುವ ವೆಸ್ಟ್ ಇಂಡೀಸ್ ತಂಡವೂ ಒಂದು ಸ್ಥಾನ ಮೇಲಕ್ಕೇರಿದ್ದು, ಆರನೇ ರ‍್ಯಾಂಕ್ ಪಡೆದುಕೊಂಡಿದೆ. ಬಾಂಗ್ಲಾದೇಶ ತಂಡ ೯ನೇ ಸ್ಥಾನಕ್ಕೆ ಕುಸಿದಿದೆ.
ಇಂಗ್ಲೆಂಡ್ ವಿರುದ್ಧ ಗೆದ್ದರೆ ಭಾರತಕ್ಕೆ ಅನುಕೂಲ
ಭಾರತ ತಂಡ ಸದ್ಯ ೫೮.೩೩ ಶೇಕಡಾವಾರು ಅಂಕವನ್ನು ಹೊಂದಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಬಾಕಿ ಉಳಿದಿರುವ ಒಂದು ಪಂದ್ಯ ಜುಲೈ ೧ರಂದು ಆರಂಭವಾಗಲಿದ್ದು. ಆ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅಂಕ ಇನ್ನಷ್ಟು ಹೆಚ್ಚಳವಾಗಬಹುದು.
ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ೯ ತಂಡಗಳ ಪೈಕಿ ಭಾರತ ಅತಿ ೪ ಸರಣಿಯಲ್ಲಿ ೧೧ ಪಂದ್ಯಗಳನ್ನು ಆಡಿದೆ. ಆದರೆ, ೬ ಗೆಲುವು ೩ ಸೋಲು ಹಾಗೂ ೨ ಪಂದ್ಯಗಳ ಸೋಲಿನೊಂದಿಗೆ ಒಟ್ಟು ೬೦ ಅಂಕಗಳನ್ನು ಪಡೆದುಕೊಂಡಿದೆ. ಆದರೆ, ಸೋಲಿನ ಪ್ರಮಾಣ ಅಧಿಕವಾಗಿರುವ ಕಾರಣ ಶೇಕಡಾವಾರು ಅಂಕ ಕಡಿಮೆಯಿದೆ. ಹೀಗಾಗಿ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ಒಟ್ಟಾರೆ ೭೧.೪೩ ಶೇಕಡಾವಾರು ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನ ಪಡೆದುಕೊಂಡಿದ್ದು, ಶೇಕಡಾ ೭೫ರಷ್ಟು ಗೆಲುವಿನ ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಐದನೇ ಸ್ಥಾನ ಹಾಗೂ ಶ್ರೀಲಂಕಾ ತಂಡ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಟೆಸ್ಟ್ ಚಾಂಪಿಯನ್‌ಷಿಪ್ ೨೦೨೧ರಲ್ಲಿ ಅರಂಭಗೊಂಡಿದ್ದು, ೨೦೨೩ರಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪ್ರತಿಯೊಂದು ತಂಡಗಳು ತಲಾ ೬ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಮೂರು ತವರು ನೆಲದಲ್ಲಿ ಹಾಗೂ ಅಷ್ಟೇ ಸಂಖ್ಯೆಯ ಸರಣಿಯನ್ನು ವಿದೇಶದಲ್ಲಿ ಆಡಬೇಕಾಗಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶಕ್ಕೆ ಭಾರತ ಪ್ರವಾಸ ಮಾಡಲಿದ್ದರೆ, ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸೆಣಸಲಿದೆ
ಇದನ್ನೂ ಓದಿ : ಲಂಕಾ ಪ್ರವಾಸ: clean sweep ಅವಕಾಶ ತಪ್ಪಿಸಿದ ಚಾಮರಿ ಅಟ್ಟಪಟ್ಟು