ನವ ದೆಹಲಿ: ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು (Virat kohli) ಮತ್ತೆ ತಮ್ಮ ಅಕಾಡೆಮಿಗೆ ಬಂದು ಅಭ್ಯಾಸ ನಡೆಸುವಂತೆ ಅವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮ ಕರೆ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಟೀಮ್ ಇಂಡಿಯಾದಲ್ಲಿ ಅವರ ಸ್ಥಾನ ಉಳಿಯುವ ಬಗ್ಗೆ ದೊಡ್ಡ ಮಟ್ಟಿನ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮತ್ತೆ ಅಕಾಡೆಮಿಗೆ ಬಂದು ಅಭ್ಯಾಸ ನಡೆಸಬಹುದು ಎಂದು ಹೇಳಿದ್ದಾರೆ.
ಅವರದ್ದೇ ಗ್ರೌಂಡ್
ನಮ್ಮ ಅಕಾಡೆಮಿ ಅವರದ್ದೇ ಗ್ರೌಂಡ್. ಈ ಹಿಂದೆ ಅವರಿಗೆ ಇಲ್ಲಿಗೆ ಬರಲು ಅನುಕೂಲ ಆಗುತ್ತಿರಲಿಲ್ಲ. ಈಗ ಅವರಿಗೆ ಸಮಯವೇನಾದರೂ ದೊರಕಿದರೆ ಖಂಡಿತವಾಗಿಯೂ ಅಕಾಡೆಮಿಗೆ ಬಂದು ಅಭ್ಯಾಸ ಮಾಡಬಹುದು. ಅವರೇನಾದರೂ ನಮ್ಮ ಅಕಾಡೆಮಿಗೆ ಬಂದು ಆರಾಮವಾಗಿ ಅಭ್ಯಾಸ ನಡೆಸಿದರೆ ನನಗೆ ಅತ್ಯಂತ ಖುಷಿಯಾಗುತ್ತದೆ, ಎಂದು ಅವರು ರಾಜ್ಕುಮಾರ್ ಶರ್ಮ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂಬುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅವರು ಔಟಾಗಿರುವ ಎಸೆತಗಳೆಲ್ಲವೂ ಉತ್ತಮ ಎಸೆತಗಳಾಗಿವೆ. ಆದಾಗ್ಯೂ ಅವರು ಅಕಾಡೆಮಿಗೆ ಬಂದರೆ, ಸಮಸ್ಯೆಗಳನ್ನು ಪರಿಹರಿಸಲಾಗುವುದು, ಎಂದು ಅವರು ಹೇಳಿದರು.
ಇದನ್ನೂ ಓದಿ | Krishan Das: ಕೃಷ್ಣ ದಾಸ್ ಕೀರ್ತನೆ ಆಲಿಸಿ ಲೋಕವನ್ನೇ ಮರೆತ ವಿರಾಟ್ ಕೊಹ್ಲಿ