ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ(WPL 2023) ಯುಪಿ ವಾರಿಯರ್ಸ್(UP Warriorz) ತಂಡಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಅಲಿಸ್ಸಾ ಹೀಲಿ(alyssa healy) ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ. ಹೀಲಿ ನಾಯಕಿಯಾಗಿ ನೇಮಕಗೊಂಡ ವಿಚಾರವನ್ನು ಫ್ರಾಂಚೈಸಿ ಟ್ವಿಟರ್ ಮೂಲಕ ಖಚಿತಪಡಿಸಿದೆ.
ಹರಾಜಿನಲ್ಲಿ 2.6 ಕೋಟಿ ರೂ. ನೀಡಿ ಖರೀದಿಸಿದ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾಗೆ (Deepti Sharma) ಈ ತಂಡದ ನಾಯಕತ್ವ ನೀಡಲಾಗುವುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅಚ್ಚರಿ ಎಂಬಂತೆ ಫ್ರಾಂಚೈಸಿ 70 ಲಕ್ಷ ರೂ.ಗೆ ಖರೀದಿಸಿದ್ದ ಆಸೀಸ್ ಆಟಗಾರ್ತಿಗೆ ಮಣೆ ಹಾಕಿದೆ.
ತಂಡದ ನಾಯಕಿಯಾಗಿ ಆಯ್ಕೆಯಾದ ಬಳಿಕ ಅಭಿಪ್ರಾಯ ಹಂಚಿಕೊಂಡಿರುವ ಹೀಲಿ, ‘ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಸೀಸನ್ನಲ್ಲಿ ಯುಪಿ ವಾರಿಯರ್ಸ್ ತಂಡಕ್ಕೆ ನಾಯಕತ್ವದ ಅವಕಾಶ ಸಿಕ್ಕಿರುವುದು ತುಂಬಾ ಸಂತಸವಾಗಿದೆ. ಯುಪಿ ತಂಡವು ಅನುಭವಿ ಮತ್ತು ಯುವ ಆಟಗಾರ್ತಿಯರ ಉತ್ತಮ ಸಂಯೋಜನೆಯಿಂದ ಕೂಡಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ’ ಎಂದು ಹೇಳಿದರು.
ಇದನ್ನೂ ಓದಿ WPL 2023: ವನಿತೆಯರ ಪ್ರೀಮಿಯರ್ ಲೀಗ್: ಟಾಟಾಗೆ ಟೈಟಲ್ ಪ್ರಾಯೋಜಕತ್ವ
ಅಲಿಸ್ಸಾ ಹೀಲಿ ಅವರು 5 ಬಾರಿ ವಿಶ್ವ ಕಪ್ ವಿಜೇತ ತಂಡದ ಆಟಗಾರ್ತಿಯಾಗಿದ್ದು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಅವರ ನೇತೃತ್ವದದಲ್ಲಿ ತಂಡ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸ ನಮಗಿದೆ’ ಎಂದು ಫ್ರಾಂಚೈಸಿ ಟ್ವಿಟರ್ನಲ್ಲಿ ಹೇಳಿದೆ.