ಮುಂಬೈ: ವನಿತೆಯರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಸೋಲು ಮುಂದುವರಿದಿದೆ. ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 11 ರನ್‌ಗಳ ಅಂತರದಲ್ಲಿ ಆರ್‌ಸಿಬಿಐ ಪರಾಜಯಗೊಂಡಿದ್ದು, ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿದೆ. ಆ ಮೂಲಕ ಟೂರ್ನಿಯಲ್ಲಿ ಆರ್‌ಸಿಬಿ ಫೈನಲ್ ಹಾದಿಯನ್ನು ಮತ್ತಷ್ಟು ದುರ್ಗಮವಾಗಿದೆ.
ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ವನಿತೆಯರ ಪ್ರೀಮಿಯರ್ ಲೀಗ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಜೈಂಟ್ಸ್ ತಂಡ ಬೃಹತ್ ಮೊತ್ತ ಪೇರಿಸಿತು. ಹರ್ಲೀನ್ ಡಿಯೋಲ್ 67 ಹಾಗೂ ಸೋಫಿಯಾ ಡಂಕ್ಲಿ 65 ರನ್ ನೆರವಿನಿಂದ 201 ರನ್ ಗಳಿಸಿತು. ಆದರೆ, ಆರ್‌ಸಿಬಿಯು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಬೃಹತ್ ಮೊತ್ತ ಬೆನ್ನತ್ತಿದ ಆರ್‌ಸಿಬಿಯು ಉತ್ತಮ ಆರಂಭ ಪಡೆಯಿತು. ಸೋಫಿ ಡಿವೈನ್ ಹಾಗೂ ಸ್ಮೃತಿ ಮಂಧಾನಾ ಅರ್ಧಶತಕದ ಜತೆಯಾಟವಾಡಿದರು. ಆದರೆ, ಸ್ಮೃತಿ 18 ರನ್ ಗಳಿಸಿದ್ದಾಗ ಮಾನ್ಸಿ ಎಸೆತದಲ್ಲಿ ಗಾರ್ಡ್ನರ್‌ಗೆ ಕ್ಯಾಚಿತ್ತು ಹೊರನಡೆದರು. ಸೋಫಿ ಡಿವೈನ್ 45 ಎಸೆತಗಳಲ್ಲಿ 66 ರನ್ ಗಳಿಸಿದರಾದರೂ ಅವರಿಗೆ ಬೇರೆ ಆಟಗಾರ್ತಿಯರಿಂದ ಸರಿಯಾದ ಸಾಥ್ ಸಿಗದ ಕಾರಣ ತಂಡವು ಸೋಲೊಪ್ಪಿಕೊಳ್ಳಬೇಕಾಯಿತು. ಕೊನೆಯಲ್ಲಿ ಹೀದರ್ ನೈಟ್ (11 ಎಸೆತಗಳಲ್ಲಿ 30 ರನ್) ಹೋರಾಟ ನಡೆಸಿದರಾದರೂ ಗೆಲುವಿನ ದಡ ಮುಟ್ಟಿಸಲು ಆಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 (ಸೋಫಿಯಾ ಡಂಕ್ಲಿ 65, ಹರ್ಲೀನ್ ಡಿಯೋಲ್ 67, ಹೀದರ್ ನೈಟ್ 17ಕ್ಕೆ 2, ಶ್ರೇಯಾಂಕ ಪಾಟೀಲ್ 32ಕ್ಕೆ 2.
ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 190 (ಸೋಫಿ ಡಿವೈನ್ 66, ಎಲಿಸೆ ಪೆರ‍್ರಿ 32, ಅಶ್ಲೀಘ್ ಗಾರ್ಡ್ನರ್ 31ಕ್ಕೆ 3)
ಇದನ್ನೂ ಓದಿ: WPL 2023: ಸೋಫಿಯಾ,ಹರ್ಲೀನ್ ಅರ್ಧಶತಕ; ಬೃಹತ್ ಮೊತ್ತ ಪೇರಿಸಿದ ಗುಜರಾತ್ ಜೈಂಟ್ಸ್