ಮುಂಬಯಿ: ಶನಿವಾರ ನಡೆದ(ಮಾರ್ಚ್ 4) ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಉದ್ಘಾಟನಾ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಂಡ ಗುಜರಾತ್ ಜೈಂಟ್ಸ್ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು (ಭಾನುವಾರ ಮಾರ್ಚ್ 5) ರಾತ್ರಿ ನಡೆಯುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಕಣ್ಣಕಿಳಿಯಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮಂಡಿನೋವಿನ ಗಾಯಕ್ಕೆ ತುತ್ತಾದ ತಂಡದ ನಾಯಕಿ ಬೆತ್ ಮೂನಿ ಈ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಸ್ನೇಹ್ ರಾಣಾ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ WPL 2023 : ಉದ್ಘಾಟನಾ ಪಂದ್ಯದಲ್ಲಿ ಮುಂಬಯಿ ತಂಡಕ್ಕೆ 143 ರನ್ ಭರ್ಜರಿ ವಿಜಯ
ಯುಪಿ ತಂಡದಲ್ಲಿ ಅಲಿಸ್ಸಾ ಹೀಲಿ, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮ, ಸೋಫಿ ಎಕ್ಲ್ಸ್ಟೋನ್, ಟಹ್ಲಿಯಾ ಮೆಗ್ರಾತ್ ಅವರು ಬಲಿಷ್ಠವಾಗಿ ಗೋಚರಿಸಿದ್ದಾರೆ. ಅದರಲ್ಲೂ ಅಂಡರ್-19 ವಿಶ್ವ ಕಪ್ ವಿಜೇತ ತಂಡದ ಶ್ವೇತಾ ಸೆಹ್ರಾವತ್ ಮೇಲೆ ಈ ಪಂದ್ಯದಲ್ಲಿ ಭಾರಿ ನಿರೀಕ್ಷೆ ಇರಿಸಲಾಗಿದೆ. ಅವರು ಅಂಡರ್-19 ವಿಶ್ವ ಕಪ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಇದೀಗ ಈ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಲು ಕಾಯುತ್ತಿದ್ದಾರೆ.