ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಉದ್ಘಾಟನಾ ಪಂದ್ಯದಲ್ಲಿ ಬೃಹತ್ ಮೊತ್ತದ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್(Mumbai Indians) ತಂಡ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಸೋಮವಾರ(ಮಾರ್ಚ್ 6) ನಡೆಯುವ ಪಂದ್ಯದಲ್ಲಿ ಆರ್ಸಿಬಿ(Royal Challengers Bangalore) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿಯೂ ಗೆಲುವು ದಾಖಲಿಸಿ ಅಜೇಯ ಓಟ ಮುಂದುವರಿಸುವುದು ಕೌರ್ ಪಡೆಯ ಯೋಜನೆಯಾಗಿದೆ.
ಸ್ಮೃತಿ ಮಂಧಾನಾ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ ಅಂತರದ ಹೀನಾಯ ಸೋಲು ಕಂಡಿತ್ತು. ಇದೀಗ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದೊಮ್ಮೆ ಆರ್ಸಿಬಿ ಈ ಪಂದ್ಯದಲ್ಲಿಯೂ ಸೋತರೆ ರನ್ರೇಟ್ ಕುಸಿತ ಕಾಣುವುದರ ಮೂಲಕ ಮುಂದಿನ ಹಂತಕ್ಕೇರಲು ಕಷ್ಟಕರವಾಗುವ ಸಾಧ್ಯತೆ ಇದೆ. ಆದ್ದರಿಂದ ಆರ್ಸಿಬಿ ಈ ಪಂದ್ಯದಿಂದಲೇ ಎಚ್ಚೆತ್ತುಕೊಂಡು ಗೆಲುವಿನ ಟ್ರ್ಯಾಕ್ಗೆ ಮರಳಬೇಕಿದೆ.
ಮುಂಬೈ ಸಮರ್ಥ ತಂಡ
ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಬ್ಯಾಟಿಂಗ್,ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಚಾರದಲ್ಲಿಯೂ ಫರ್ಪೆಕ್ಟ್ ಆಗಿದೆ. ಇದಕ್ಕೆ ಗುಜರಾತ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯದ ಫಲಿತಾಂಶವೇ ಉತ್ತಮ ನಿದರ್ಶನ. ಈ ಪಂದ್ಯದಲ್ಲಿ ಮುಂಬೈ ತಂಡ 143 ರನ್ ಗೆಲುವು ಸಾಧಿಸಿತ್ತು. ಕೌರ್ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಈ ಪಂದ್ಯದಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ.