ಮುಂಬಯಿ: ಬಹುನಿರೀಕ್ಷಿತ ವುಮೆನ್ಸ್ ಪ್ರೀಮಿಯರ್ ಲೀಗ್(WPL 2023) ಕ್ರಿಕೆಟ್ ಟೂರ್ನಿ ಆಡಲು ಎಲ್ಲ 5 ತಂಡಗಳೂ ಈಗಾಗಲೇ ಸಲಕ ಸಿದ್ಧತೆ ನಡೆಸಿವೆ. ಮಾರ್ಚ್ 4 ರಂದು ಈ ಚೊಚ್ಚಲ ಆವೃತ್ತಿಗೆ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್(mumbai indians) ಮುಖಾಮುಖಿಯಾಗಲಿದೆ. ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕಿಯಾದ ಹರ್ಮನ್ಪ್ರೀತ್ ಕೌರ್(harmanpreet kaur) ಬಗ್ಗೆ ತಂಡದ ಮಾಲಕಿ ನೀತಾ ಎಂ. ಅಂಬಾನಿ(Nita Ambani) ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನೀತಾ ಎಂ. ಅಂಬಾನಿ, ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮೊಟ್ಟಮೊದಲ ನಾಯಕಿಯಾಗಿ ಹರ್ಮನ್ಪ್ರೀತ್ ಕೌರ್ ಅವರು ನೇಮಕವಾಗಿರುವುದು ಸಂತಸ ತಂದಿದೆ. ಜತೆಗೆ ಅವರು ನಮ್ಮ ತಂಡದ ಭಾಗವಾಗಿರುವುದು ಮತ್ತಷ್ಟು ಖುಷಿ ನೀಡಿದೆ ಎಂದರು.
“ಭಾರತ ತಂಡದ ನಾಯಕಿಯಾಗಿರುವ ಕೌರ್ ಭಾರತೀಯ ಮಹಿಳಾ ತಂಡಕ್ಕೆ ಕೆಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ತರಬೇತುದಾರರಾದ ಚಾರ್ಲೋಟ್ ಮತ್ತು ಜೂಲನ್ ಬೆಂಬಲದೊಂದಿಗೆ ಅವರು, ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಶ್ರೇಷ್ಠ ಕ್ರಿಕೆಟ್ ಆಡಲು ಸ್ಫೂರ್ತಿ ತುಂಬುವ ವಿಶ್ವಾಸವಿದೆ. ಅವರ ಸಾರಥ್ಯದಲ್ಲಿ ತಂಡ ಹೊಸ ಅಧ್ಯಾಯದ ಬರೆಯುವುದನ್ನು ನೋಡಲು ನಾವು ಕಾಯುತ್ತಿದ್ದೇವೆ. ನಮ್ಮ ಅಭಿಮಾನಿಗಳ ನೆಚ್ಚಿನ ಮುಂಬೈ ತಂಡವನ್ನು ನಿರ್ಭೀತಿ ಮತ್ತು ಮನರಂಜನೆಯ ಆಟದ ಮೂಲಕ ನಮ್ಮ ಹುಡುಗಿಯರೂ ಆಡುವುದನ್ನು ನೋಡಲು ನಾನು ಕಾತರಗೊಂಡಿದ್ದೇನೆ” ಎಂದು ನೀತಾ ಎಂ. ಅಂಬಾನಿ ಹೇಳಿದರು.
ಮುಖ್ಯ ಕೋಚ್ ಚಾರ್ಲೋಟ್ ಎಡ್ವರ್ಡ್ಸ್ ಎದುರಾಳಿಯಾಗಿ ಮತ್ತು ಮೆಂಟರ್ ಜೂಲನ್ ಗೋಸ್ವಾಮಿ ಜತೆಗೆ ಟೀಮ್ ಇಂಡಿಯಾದಲ್ಲಿ ಜತೆಯಾಗಿ ಆಡಿದ ಅನುಭವವನ್ನು ಕೌರ್ ಹೊಂದಿದ್ದಾರೆ. ಆದ್ದರಿಂದ ಅವರಿಗೆ ತಂಡ ಸಂಯೋಜನೆಗೆ ಸಮಸ್ಯೆ ಉಂಟಾಗದು. ಒಟ್ಟಾರೆ ಅವರ ಸಾರಥ್ಯದಲ್ಲಿ ಮುಂಬೈ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಎಂದು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ತರಬೇತಿ ಬಳಗದಲ್ಲಿ ಚಾರ್ಲೋಟ್ ಎಡ್ವರ್ಡ್ಸ್(ಮುಖ್ಯ ಕೋಚ್), ಜೂಲನ್ ಗೋಸ್ವಾಮಿ (ಮೆಂಟರ್, ಬೌಲಿಂಗ್ ಕೋಚ್), ದೇವಿಕಾ ಪಾಲ್ಶಿಕರ್ (ಬ್ಯಾಟಿಂಗ್ ಕೋಚ್), ಲೈಡಿಯಾ ಗ್ರೀನ್ವೇ (ಫೀಲ್ಡಿಂಗ್ ಕೋಚ್) ಇದ್ದಾರೆ. ತಂಡದಲ್ಲಿ ಹರ್ಮನ್ಪ್ರೀತ್ ಕೌರ್, ನಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಬೆಲ್ ವೊಂಗ್, ಅಮನ್ಜೋತ್ ಕೌರ್, ಧಾರಾ ಗುಜ್ಜರ್, ಶೇಕಾ ಇಶಾಕ್, ಹ್ಯಾಲಿ ಮ್ಯಾಥ್ಯೂಸ್, ಕ್ಲೋಯಿ ಟ್ರೈಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲ, ಸೋನಂ ಯಾದವ್, ನೀಲಮ್ ಬಿಸ್ಟ್, ಜಿಂಟಿಮನಿ ಕಲಿಟಾ ಆಟಗಾರ್ತಿಯರಾಗಿದ್ದಾರೆ.
ಇದನ್ನೂ ಓದಿ WPL 2023: ಮುಂಬೈ ತಲುಪಿದ ಆರ್ಸಿಬಿ ಆಟಗಾರ್ತಿಯರು
ಹರ್ಮನ್ಪ್ರೀತ್ ಕೌರ್ ಸಾಧನೆ
ಇತ್ತೀಚೆಗಷ್ಟೇ 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟರ್ ಎನಿಸಿದ್ದ ಹರ್ಮನ್ಪ್ರೀತ್ ಕೌರ್, 20ನೇ ವಯಸ್ಸಿನಲ್ಲೇ ಕ್ರಿಕೆಟ್ ಪದಾರ್ಪಣೆ ಮಾಡಿದ ಅವರು ಕಳೆದೊಂದು ದಶಕದಿಂದ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಆಧಾರಸ್ತಂಭವೆನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಅವರು, ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿದ್ದಾರೆ. ಮಹಿಳೆಯರ ಏಕ ದಿನ ವಿಶ್ವ ಕಪ್ನಲ್ಲಿ ನಾಕೌಟ್ ಹಂತದ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ರನ್ (171*) ಸಿಡಿಸಿದ ದಾಖಲೆ ಜತೆಗೆ ನಾಯಕಿಯಾಗಿ ಉತ್ತಮ ಗೆಲುವಿನ ದಾಖಲೆಯನ್ನೂ ಅವರು ಹೊಂದಿದ್ದಾರೆ.