ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್(WPL 2023) ಟಿ20 ಕ್ರಿಕೆಟ್ ಲೀಗ್ ಅಂತಿಮ ಹಂತಕ್ಕೆ ಬಂದು ನಿಂತಿದೆ. 2 ಪಂದ್ಯಗಳು ನಡೆದರೆ ಈ ಟೂರ್ನಿಗೆ ತರೆ ಬೀಳಲಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಟಿಕೆಟ್ ಪಡೆದಿದೆ. ಇದೀಗ ಶುಕ್ರವಾರ(ಮಾರ್ಚ್ 24) ನಡೆಯುವ ಪ್ಲೇ-ಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಮತ್ತು ಯುಪಿ ವಾರಿಯರ್ಸ್(UP Warriorz) ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡ ಫೈನಲ್ಗೆ ಲಗ್ಗೆ ಇಡಲಿದೆ.
ಮುಂಬೈ ಬಲಿಷ್ಠ
ಟೂರ್ನಿಯ ಅತ್ಯಂತ ಬಲಿಷ್ಠ ತಂಡ ಎನಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠವಾಗಿದೆ. ಹ್ಯಾಲೀ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್, ಅಮೇಲಿಯಾ ಕೆರ್ ಉತ್ತಮ ಫಾರ್ಮ್ನಲ್ಲಿದ್ದರೆ ಸೈಕಾ ಇಶಾಕ್, ಅಮೇಲಿಯಾ ಕೆರ್ ಬೌಲಿಂಗ್‌ನಲ್ಲಿ ಮಿಂಚಲಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅಜೇಯ ಮುಂಬೈಗೆ ಮೊದಲು ಸೋಲುಣಿಸಿದ್ದು. ಯುಪಿ ವಾರಿಯರ್ಸ್. ಹೀಗಾಗಿ ಮುಂಬೈ ಬಲಿಷ್ಠವಾಗಿದ್ದರೂ ಈ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಬೇಕು.
ಯುಪಿ ತಂಡವೂ ಉತ್ತಮವಾಗಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ತಂಡ ಉತ್ತಮ ನಿರ್ವಹಣೆ ನೀಡುವಲ್ಲಿ ಎಡವುತ್ತಿದೆ. ಈ ಸಮಸ್ಯೆ ಬಗೆಹರಿದರೆ ತಂಡಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ತಂಡದ ನಾಯಕಿ ಅಲಿಸ್ಸಾ ಹೀಲಿ, ತಹ್ಲಿಯಾ ಮೆಕ್‌ಗ್ರಾಥ್, ಸೋಫಿ ಎಕ್ಲೆಸ್ಟೋನ್ ಮತ್ತು ಗ್ರೇಸ್ ಹ್ಯಾರಿಸ್ ಅವರ ಆಟ ಈ ಪಂದ್ಯದಲ್ಲಿ ನಿರ್ಣಾಯಕವಾಗಿದೆ.
ಸಂಭಾವ್ಯ ತಂಡಗಳು
ಮುಂಬಯಿ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ, ನ್ಯಾಟ್ ಸೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ ಜಿಂತಿಮಾನಿ ಕಲಿತಾ.
ಯುಪಿ ವಾರಿಯರ್ಸ್: ದೇವಿಕಾ ವೈದ್ಯ,, ಅಲಿಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್. ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.