ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಭಾನುವಾರದ ಡಬಲ್ ಹೆಡ್ಡರ್ ಹಣಾಹಣಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ(Royal Challengers Bangalore) ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಗಳು ಮುಖಾಮುಖಿಯಾಗಲಿವೆ. ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಸೆಣಸಾಡಲಿವೆ.
ಡೆಲ್ಲಿ ಹೆಚ್ಚಾಗಿ ಯುವ ಪಡೆಯನ್ನೇ ನೆಚ್ಚಿಕೊಂಡಿದೆ. ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ತನಿಯಾ ಭಾಟಿಯಾ, ಅಂಡರ್-19 ವಿಶ್ವಕಪ್‌ನಲ್ಲಿ ಮಿಂಚಿದ ತಿತಾಸ್ ಸಾಧು, ಜಮ್ಮು ಮತ್ತು ಕಾಶ್ಮೀರದ ಬಿಗ್ ಹಿಟ್ಟರ್ ಜಾಸಿಯಾ ಅಖ್ತರ್ ಇವರೆಲ್ಲ ಯುವ ಆಟಗಾರ್ತಿಯರಾದರೆ 5 ಟಿ20 ವಿಶ್ವಕಪ್ ವಿಜೇತ ಆಸೀಸ್ ತಂಡದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನಿಂಗ್ ಡೆಲ್ಲಿ ತಂಡದ ಸಾರಥಿಯಾಗಿದ್ದಾರೆ. ಇವರನ್ನೊಳಗೊಂಡ ಡೆಲ್ಲಿ ಬಲಿಷ್ಠವಾಗಿ ಗೋಚರಿಸಿದೆ.
ಇದನ್ನೂ ಓದಿ WPL 2023 : ಉದ್ಘಾಟನಾ ಪಂದ್ಯದಲ್ಲಿ ಮುಂಬಯಿ ತಂಡಕ್ಕೆ 143 ರನ್ ಭರ್ಜರಿ ವಿಜಯ
ಮೇಲ್ನೋಟಕ್ಕೆ ಸ್ಮೃತಿ ಮಂಧಾನಾ ನೇತೃತ್ವದ ಆರ್‌ಸಿಬಿ ತಂಡವೂ ಬಲಿಷ್ಠವಾಗಿ ಗೋಚರಿಸುತ್ತಿದೆ. ಸ್ಟಾರ್ ಆಟಗಾರ್ತಿಯರಾದ ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ ಹಾರ್ಡ್ ಹಿಟ್ಟರ್ ರಿಚಾ ಘೋಷ್, ಇಂಗ್ಲೆಂಡ್ ತಂಡದ ನಾಯಕಿ ಹೀತರ್ ನೈಟ್, ಮೆಗಾನ್ ಶಟ್, ರೇಣುಕಾ ಸಿಂಗ್ ಮೊದಲಾದ ಸ್ಟಾರ್ ಆಟಗಾರ್ತಿಯರು ಒಂದೆಡೆ ಸೇರಿದ್ದಾರೆ. ಪುರುಷರ ಆರ್‌ಸಿಬಿ ತಂಡವೂ ಇದೇ ರೀತಿ ಬಲಿಷ್ಠವಾಗಿತ್ತು. ಆದರೆ ಅದೃಷ್ಟದ ವಿಚಾರದಲ್ಲಿ ಯಾವತ್ತು ಹಿಂದೆ ಇರುತ್ತಿತ್ತು. ಇದೀಗ ಈವರೆಗೆ ಪುರುಷರಿಗೆ ಒಲಿಯದ ಟ್ರೋಫಿಯನ್ನು ಮಹಿಳೆಯರಾದರೂ ತಂದುಕೊಡಲಿ ಎಂಬುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆ.