ಮುಂಬಯಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್(WPL 2023) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4 ರಂದು ಈ ಟೂರ್ನಿಗೆ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಈ ಟೂರ್ನಿಗಾಗಿ ಆರ್ಸಿಬಿ(RCB) ತಂಡದ ಆಟಗಾರ್ತಿಯರು ಈಗಾಗಲೇ ಮುಂಬೈ ತಲುಪಿದ್ದಾರೆ.
ಮಾರ್ಚ್ 5ರಂದು ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ರಾಬೌರ್ನೆ ಮೈದಾನದಲ್ಲಿ ಎದುರಿಸಲಿದೆ. ಬುಧವಾರ ಆರ್ಸಿಬಿಯ ಆಟಗಾರ್ತಿಯರು ಮುಂಬೈ ತಲುಪಿರುವ ಫೋಟೊವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ನಮಸ್ಕಾರ ಮುಂಬೈ, ನಮ್ಮ ಆಟಗಾರ್ತಿಯರು ಮುಂಬೈ ತಲುಪಿದ್ದಾರೆ, ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿ ಆಡಲು ಕಾತರದಿಂದ ಕಾಯುತ್ತಿದ್ದಾರೆ ಎಂದು ಫ್ರಾಂಚೈಸಿ ಟ್ವಿಟರ್ನಲ್ಲಿ ಬರೆದುಕೊಂಡಿದೆ. ಮುಂಬೈ ತಲುಪಿದ ವೇಳೆ ಆರ್ಸಿಬಿ ಆಟಗಾರ್ತಿಯರು ಈ ಸಲ ಕಪ್ ನಮ್ದೆ ಎಂದು ಹೇಳಿದ್ದಾರೆ.