ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡು ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದ್ದ ಗುಜರಾತ್ ಜೈಂಟ್ಸ್(Gujarat Giants) ತಂಡಕ್ಕೆ ಭಾರಿ ಆಘಾತವೊಂದು ಎದುರಾಗಿದೆ. ತಂಡದ ನಾಯಕಿ ಬೆತ್ ಮೂನಿ(Beth Mooney) ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ.
ಶನಿವಾರ(ಮಾರ್ಚ್ 4) ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬೆತ್ ಮೂನಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ತೀವ್ರ ಮಂಡಿ ನೋವಿನ ಸಮಸ್ಯೆಯಿಂದ ಮೈದಾನದಲ್ಲೆ ಕುಸಿದು ಬಿದ್ದರು. ಇದಾದ ಬಳಿಕ ಅವರನ್ನು ಸಹ ಆಟಗಾರರು ಮೈದಾನದಿಂದ ಹೊರಗೆ ಕರೆದೊಯ್ದರು. ಬಳಿಕ ಅವರು ಬ್ಯಾಟಿಂಗ್ ನಡೆಸಲಿಲ್ಲ. ಇದೀಗ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಅವರು ಈ ಟೂರ್ನಿಯಿಂದ ಹೊರಬಿದ್ದಿದ್ದು ಅವರ ಬದಲು ತಂಡವನ್ನು ಉಪನಾಯಕಿಯಾಗಿದ್ದ ಸ್ನೇಹ್ ರಾಣಾ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ WPL 2023: ಡೆಲ್ಲಿಗೆ ಡಿಕ್ಕಿ ಹೊಡೆದಿತೇ ಆರ್ಸಿಬಿ
ಒಂದೊಮ್ಮೆ ಬೆತ್ ಮೂನಿ ಈ ಟೂರ್ನಿಯಿಂದ ಹೊರಬಿದ್ದರೆ ಗುಜರಾತ್ ಜೈಂಟ್ಸ್ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು. ಏಕೆಂದರೆ ದಕ್ಷಿಣ ಆಫ್ರಿಕಾದಲ್ಲಿ ಮುಕ್ತಾಯ ಕಂಡ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸುವಲ್ಲಿ ಬೆತ್ ಮೂನಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರತಿ ಪಂದ್ಯದಲ್ಲಿಯೂ ಏಕಾಂಕಿಯಾಗಿ ಹೋರಾಡಿ ತಂಡವನ್ನು ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದ್ದರು. ಆದರೆ ಇದೀಗ ಅವರು ಗಾಯದಿಂದಾಗಿ ಮಹಿಳಾ ಪ್ರೀಮಿಯರ್ ಲೀಗ್ ಆಡುವುದೇ ಅನುಮಾನ ಎನ್ನಲಾಗಿದೆ.